ಸಿಂಗ್ರೌಲಿ (ಮಧ್ಯಪ್ರದೇಶ): ಶಾಸಕರೊಬ್ಬರ ಅಧಿಕೃತ ನಿವಾಸದ ಮುಂಭಾಗ ತುರ್ತು ಸೇವೆಗೆ ಬಳಸುವ ಅಗ್ನಿಶಾಮಕ ವಾಹನದಿಂದ (ಫೈರ್ ಬ್ರಿಗೇಡ್) ಅವರ ಖಾಸಗಿ ಟೊಯೋಟಾ ಇನ್ನೋವಾ ಕಾರನ್ನು ತೊಳೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಮಧ್ಯಪ್ರದೇಶದ ಸಿಂಗ್ರೌಲಿ ಕ್ಷೇತ್ರದ ಬಿಜೆಪಿ ಶಾಸಕ ರಾಮ್ನಿವಾಸ್ ಶಾ ಅವರ ನಿವಾಸದ ಹೊರಗೆ ಈ ಘಟನೆ ನಡೆದಿದೆ. ವೈರಲ್ ಆಗಿರುವ ವಿಡಿಯೋದಲ್ಲಿ ಮಹಾನಗರ ಪಾಲಿಕೆಯ ಮೂವರು ಸಿಬ್ಬಂದಿಗಳು ಅಗ್ನಿಶಾಮಕ ವಾಹನದ ಪೈಪ್ ಹಿಡಿದು ಶಾಸಕರ ಕಾರಿಗೆ ನೀರು ಹೊಡೆದು ತೊಳೆಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಜನಸಾಮಾನ್ಯರ ಮನೆಗೆ ಬೆಂಕಿ ಬಿದ್ದಾಗ ಸರಿಯಾದ ಸಮಯಕ್ಕೆ ಬರದ ಅಗ್ನಿಶಾಮಕ ವಾಹನಗಳು, ಬಿಜೆಪಿ ಶಾಸಕರ ಕಾರು ತೊಳೆಯಲು ಬಳಕೆಯಾಗುತ್ತಿರುವುದು ದುರಂತ ಎಂದು ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಈ ಕುರಿತು ಸಾರ್ವಜನಿಕ ವಲಯದಲ್ಲೂ ಸರಕಾರಿ ಯಂತ್ರಾಂಗದ ದುರ್ಬಳಕೆ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ವಿಧಾನಸಭೆಯ ವಿಪಕ್ಷ ನಾಯಕ ಉಮಂಗ್ ಸಿಂಗಾರ್, “ಸಾಮಾನ್ಯ ಜನರ ಮನೆಗೆ ಬೆಂಕಿ ಬಿದ್ದಾಗ ಅದನ್ನು ನಂದಿಸಲು ಅಗ್ನಿಶಾಮಕ ವಾಹನ ತಲುಪುವುದಿಲ್ಲ, ಆದರೆ ಸಿಂಗ್ರೌಲಿಯಲ್ಲಿ ಬಿಜೆಪಿ ಶಾಸಕರು ಸರಕಾರಿ ಅಗ್ನಿಶಾಮಕ ವಾಹನವನ್ನೇ ತಮ್ಮ ಖಾಸಗಿ ವಾಷಿಂಗ್ ಸೆಂಟರ್ ಮಾಡಿಕೊಂಡಿದ್ದಾರೆ” ಎಂದು ಕಟುವಾಗಿ ಟೀಕಿಸಿದ್ದಾರೆ.
ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ರಾಮ್ನಿವಾಸ್ ಶಾ, ತಮ್ಮ ತಪ್ಪನ್ನು ಒಪ್ಪಿಕೊಳ್ಳುವ ಬದಲು ಕಾಂಗ್ರೆಸ್ ವಿರುದ್ಧವೇ ತಿರುಗೇಟು ನೀಡಿದ್ದಾರೆ. “ಮೊದಲು ಒಂದು ವಿಷಯ ಅರ್ಥ ಮಾಡಿಕೊಳ್ಳಿ, ಶಾಸಕರಾದವರು ತಾವೇ ನಿಂತು ಕಾರು ತೊಳೆಯುತ್ತಾರೆಯೇ?” ಎಂದು ಪ್ರಶ್ನಿಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ತಾವು ಸ್ಥಳದಲ್ಲೇ ಇರಲಿಲ್ಲ ಎಂದು ಸಮರ್ಥಿಸಿಕೊಂಡ ಶಾಸಕರು,”ನಾನು ಭೋಪಾಲ್ನಿಂದ ಹಿಂತಿರುಗಿ ಶಾಲೆಯೊಂದರಲ್ಲಿ ಸೈಕಲ್ ವಿತರಣೆ ಕಾರ್ಯಕ್ರಮ, ಸಭೆಗಳಲ್ಲಿ ಭಾಗವಹಿಸಲು ಹೋಗಿದ್ದೆ. ಕಾರನ್ನು ಬೇಗ ತೆಗೆದುಕೊಂಡು ಬಾ ಎಂದು ಚಾಲಕನಿಗೆ ಹೇಳಿದ್ದೆ ಅಷ್ಟೇ. ಅಲ್ಲಿ ಏನು ನಡೆಯಿತು ಎಂಬುದು ನನಗೆ ಗೊತ್ತಿಲ್ಲ. ಇದರ ಬಗ್ಗೆ ನಾನು ಹೆಚ್ಚಿಗೆ ಏನನ್ನೂ ಹೇಳಲು ಸಾಧ್ಯವಿಲ್ಲ” ಎಂದು ಹೇಳುವ ಮೂಲಕ ಜಾರಿಕೊಂಡಿದ್ದಾರೆ.
ಸಾಮಾನ್ಯ ತುರ್ತು ಸೇವೆಗೆ ಮೀಸಲಾದ ಸರಕಾರಿ ವಾಹನವನ್ನು ವೈಯಕ್ತಿಕ ಕೆಲಸಕ್ಕೆ ಬಳಸಿಕೊಂಡಿರುವುದು ಈಗ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೆ ದೊಡ್ಡ ಮುಜುಗರ ಉಂಟುಮಾಡಿದೆ.
