ನವದೆಹಲಿ: ನೀಟ್-ಯುಜಿ ಪರೀಕ್ಷಾ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಹಾಗೂ ದೆಹಲಿಯಲ್ಲಿ ಕಾಕ್ರೋಚ್ ಜಂಟಾ ಪಾರ್ಟಿ ನಡೆಸುತ್ತಿರುವ ವಿದ್ಯಾರ್ಥಿ ಹೋರಾಟಕ್ಕೆ ಬೆಂಬಲ ಸೂಚಿಸಿ, ಶನಿವಾರ ದೇಶಾದ್ಯಂತ ‘ಕ್ಯಾಂಡಲ್ ಮಾರ್ಚ್’ (ಮೇಣದಬತ್ತಿ ಮೆರವಣಿಗೆ) ನಡೆಸಲು ಕಾಂಗ್ರೆಸ್ ಪಕ್ಷ ನಿರ್ಧರಿಸಿದೆ.
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿರ್ದೇಶನದಂತೆ, ಪಕ್ಷದ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಶುಕ್ರವಾರ (ಜುಲೈ 24) ‘ಮೋಸ್ಟ್ ಅರ್ಜೆಂಟ್’ (ತೀರಾ ತುರ್ತು) ಸುತ್ತೋಲೆಯನ್ನು ಜಾರಿಗೊಳಿಸಿದ್ದಾರೆ.
ಎಐಸಿಸಿ ಜಾರಿಗೊಳಿಸಿರುವ ಸುತ್ತೋಲೆಯ ಪ್ರಕಾರ, ದೇಶದ ಎಲ್ಲಾ ರಾಜ್ಯಗಳು, ಜಿಲ್ಲೆಗಳು ಹಾಗೂ ಬ್ಲಾಕ್ ಕಮಿಟಿಗಳ ವ್ಯಾಪ್ತಿಯಲ್ಲಿ ಶನಿವಾರ ಸಂಜೆ ಶಾಂತಿಯುತ ಪ್ರತಿಭಟನೆ ನಡೆಯಲಿದೆ. ಮಧ್ಯಪ್ರದೇಶ ಸೇರಿದಂತೆ ದೇಶದ ಪ್ರತಿಯೊಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ (DCC) ನೇತೃತ್ವದಲ್ಲಿ ಬೃಹತ್ ಮೇಣದಬತ್ತಿ ಮೆರವಣಿಗೆ ಆಯೋಜಿಸಲಾಗುವುದು.
ಈ ಕ್ಯಾಂಡಲ್ ಮಾರ್ಚ್ ಆಯಾ ನಗರಗಳಲ್ಲಿರುವ ಮಹಾತ್ಮ ಗಾಂಧಿ ಅಥವಾ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗಳ ಬಳಿ ಮುಕ್ತಾಯಗೊಳ್ಳಲಿದ್ದು, ತದನಂತರ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರತಿಮೆಯ ಎದುರು ಕುಳಿತು ಧರಣಿ/ಸತ್ಯಾಗ್ರಹ ನಡೆಸಲಿದ್ದಾರೆ.
ಪರೀಕ್ಷಾ ವ್ಯವಸ್ಥೆಯ ಅಕ್ರಮಗಳಿಂದ ತೊಂದರೆಗೊಳಗಾಗಿರುವ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯವನ್ನು ರಕ್ಷಿಸಲು ಈ ಹೆಜ್ಜೆ ಇಡಲಾಗುತ್ತಿದೆ ಎಂದು ಕಾಂಗ್ರೆಸ್ ತಿಳಿಸಿದೆ.
