Trending

ಶಿವಮೊಗ್ಗದ ACF ಕಿರಣ್ ಅಂಗಡಿ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ : ಆಸ್ತಿ ದಾಖಲೆಗಳನ್ನು ಪರಿಶೀಲನೆ

Spread the love

ಶಿವಮೊಗ್ಗ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗೆ ಲೋಕಾಯುಕ್ತ ಸರಣಿ ಶಾಕ್ ನೀಡುತ್ತಲೇ ಇದ್ದು, ಇದೀಗ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಮಾಡಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ACF) ಕಿರಣ್ ಅಂಗಡಿ ಅವರಿಗೆ ಲೋಕಾಯುಕ್ತ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.

ಬುಧವಾರ ಮುಂಜಾನೆಯೇ ಅಧಿಕಾರಿಯ ನಿವಾಸ ಹಾಗೂ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿರುವ ಅಧಿಕಾರಿಗಳ ತಂಡ, ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದು ತನಿಖೆ ತೀವ್ರಗೊಳಿಸಿದೆ.

ಮುಂಜಾನೆಯೇ ಶಾಕ್ ನೀಡಿದ ಅಧಿಕಾರಿಗಳು:

ಶಿವಮೊಗ್ಗ ನಗರದ ಆಳ್ಕೊಳ ವೃತ್ತದ ಸಮೀಪವಿರುವ ಅರಣ್ಯ ಇಲಾಖೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದಲ್ಲಿ ಕಿರಣ್ ಅಂಗಡಿಯವರು ಸದ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಇವರ ವಿರುದ್ಧ ಸಾರ್ವಜನಿಕ ವಲಯದಿಂದ ಆದಾಯ ಮೀರಿ ಆಸ್ತಿ ಗಳಿಕೆ ಮಾಡಿರುವ ಕುರಿತು ನಂಬಿಕಸ್ಥ ಮೂಲಗಳಿಂದ ದೂರುಗಳು ಸಲ್ಲಿಕೆಯಾಗಿದ್ದವು. ಈ ಹಿನ್ನೆಲೆಯಲ್ಲಿ ಕೋರ್ಟ್ ವಾರಂಟ್ ಪಡೆದ ಲೋಕಾಯುಕ್ತ ಇನ್ಸ್‌ಪೆಕ್ಟರ್ ರುದ್ರೇಶ್ ನೇತೃತ್ವದ ತಂಡವು ಬುಧವಾರ ಬೆಳಗ್ಗೆ ದಿಢೀರ್ ಕಾರ್ಯಾಚರಣೆ ಕೈಗೊಂಡಿದೆ.

ಏಕಕಾಲದಲ್ಲಿ ವಿವಿಧೆಡೆ ಶೋಧ ಕಾರ್ಯ:

ಶಿವಮೊಗ್ಗದ ಲೋಕಾಯುಕ್ತ ಪೊಲೀಸ್ ಅಧೀಕ್ಷಕರ (SP) ನೇರ ಮಾರ್ಗದರ್ಶನದಲ್ಲಿ ಈ ಹೈವೋಲ್ಟೇಜ್ ಕಾರ್ಯಾಚರಣೆ ನಡೆದಿದೆ. 10 ಕ್ಕೂ ಹೆಚ್ಚು ಅಧಿಕಾರಿಗಳು ಹಾಗೂ ಸಿಬ್ಬಂದಿ ಒಳಗೊಂಡ ತಂಡವು ಎಸಿಎಫ್ ಕಿರಣ್ ಅಂಗಡಿ ಅವರ ಶಿವಮೊಗ್ಗದ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ಮಾಡಿದೆ.

ಕೇವಲ ಶಿವಮೊಗ್ಗ ಮಾತ್ರವಲ್ಲದೆ, ಇವರು ಈ ಹಿಂದೆ ಸುದೀರ್ಘ ಸೇವೆ ಸಲ್ಲಿಸಿದ್ದ ಧಾರವಾಡ ಸೇರಿದಂತೆ ರಾಜ್ಯದ ವಿವಿಧ ಇತರೆ ಸ್ಥಳಗಳಲ್ಲೂ ಲೋಕಾಯುಕ್ತದ ಪ್ರತ್ಯೇಕ ತಂಡಗಳು ಏಕಕಾಲಕ್ಕೆ ತಪಾಸಣೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಧಾರವಾಡದಿಂದ ವರ್ಗಾವಣೆಯಾಗಿದ್ದರು:

ಲೋಕಾಯುಕ್ತ ಮೂಲಗಳ ಪ್ರಕಾರ, ಕಿರಣ್ ಅಂಗಡಿಯವರು ಸುಮಾರು ಒಂದು ವರ್ಷದ ಹಿಂದೆಯಷ್ಟೇ ಧಾರವಾಡದಿಂದ ಶಿವಮೊಗ್ಗಕ್ಕೆ ವರ್ಗಾವಣೆಗೊಂಡು ಇಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದರು. ಇವರು ಈ ಹಿಂದಿನ ಸೇವಾ ಅವಧಿಯಲ್ಲೂ ವ್ಯಾಪಕ ಅಕ್ರಮ ಎಸಗಿ ಆಸ್ತಿ ಪಾಸ್ತಿ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸದ್ಯ ಕಚೇರಿ ಮತ್ತು ನಿವಾಸದ ಮೂಲೆ ಮೂಲೆಯನ್ನು ಜಾಲಾಡುತ್ತಿರುವ ಅಧಿಕಾರಿಗಳು ಚಿನ್ನಾಭರಣ, ನಗದು, ಬ್ಯಾಂಕ್ ಖಾತೆಗಳು ಹಾಗೂ ರಿಯಲ್ ಎಸ್ಟೇಟ್ ಹೂಡಿಕೆಗೆ ಸಂಬಂಧಿಸಿದ ಪ್ರಮುಖ ದಸ್ತಾವೇಜುಗಳನ್ನು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ.

ದಾಳಿಯ ಸಂಪೂರ್ಣ ಪ್ರಕ್ರಿಯೆ ಮುಗಿದ ಬಳಿಕವಷ್ಟೇ ವಶಪಡಿಸಿಕೊಳ್ಳಲಾದ ಅಕ್ರಮ ಆಸ್ತಿಯ ಒಟ್ಟು ಮೌಲ್ಯ ಎಷ್ಟು ಎಂಬ ಅಧಿಕೃತ ಮಾಹಿತಿ ಹೊರಬರಬೇಕಿದೆ. ಸದ್ಯ ಭ್ರಷ್ಟ ಅಧಿಕಾರಿಯ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಲೋಕಾಯುಕ್ತ ತನಿಖೆ ಚುರುಕಾಗಿದೆ.

 

[pj-news-ticker]