ಆನಂದಪುರ (ಶಿವಮೊಗ್ಗ): ನಿಧಿಯ ರೂಪದಲ್ಲಿ ಸಿಕ್ಕಿರುವ ಬಂಗಾರದ ನಾಣ್ಯಗಳನ್ನು ಕಡಿಮೆ ಬೆಲೆಗೆ ಕೊಡುವುದಾಗಿ ನಂಬಿಸಿದ ವಂಚಕರು ಮೈಸೂರು ಮೂಲದ ವ್ಯಕ್ತಿಯೊಬ್ಬರಿಂದ 9.60 ಲಕ್ಷ ಹಣ ಹಾಗೂ ಎರಡು ಮೊಬೈಲ್ ಫೋನ್ಗಳನ್ನು ಕಸಿದುಕೊಂಡು ಪರಾರಿಯಾದ ಘಟನೆ ಸಾಗರ ತಾಲೂಕಿನ ಜೋಗಿನಗದ್ದೆ ಎಂಬ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೈಸೂರಿನ ಕೆ.ಆರ್ ಪುರದ ನಿವಾಸಿ ಜೆ .ಜಗದೀಶ್ (41) ವಂಚನೆಗೆ ಒಳಗಾದ ವ್ಯಕ್ತಿಯಾಗಿದ್ದಾರೆ.
ಏನಿದು ಘಟನೆ?:
ಜೆ. ಜಗದೀಶ್ ಅವರಿಗೆ ಜೂನ್ 1, 2026 ರಂದು ಅಪರಿಚಿತ ನಂಬರ್ನಿಂದ ಕರೆ ಮಾಡಿ ನನಗೆ ನಿಧಿ (ಬಂಗಾರದ ನಾಣ್ಯಗಳು) ಸಿಕ್ಕಿದ್ದು, ಕಡಿಮೆ ಬೆಲೆಗೆ ನೀಡುವುದಾಗಿ ತಿಳಿಸಿ, ವಿಡಿಯೋ ಕಾಲ್ ಮೂಲಕ ನಾಣ್ಯಗಳನ್ನು ತೋರಿಸಿ ಜಗದೀಶ್ ಅವರಲ್ಲಿ ನಂಬಿಕೆ ಬರುವಂತಹ ಕೆಲಸವನ್ನು ಮಾಡಿದ್ದಾರೆ.
ಇದನ್ನು ಸತ್ಯವೆಂದು ನಂಬಿದ ಜಗದೀಶ್ ಅವರು ಜೂನ್ 2 ರಂದು ಹರಿಹರಕ್ಕೆ ಹೋಗಿದ್ದಾರೆ. ಅಲ್ಲಿ ಇಬ್ಬರು ವಂಚಕರು ಅವರಿಗೆ ಒಂದು ನಾಣ್ಯವನ್ನು ನೀಡಿ ಅಸಲಿ ಬಂಗಾರವೇ ಎಂದು ಪರಿಶೀಲಿಸಿಕೊಳ್ಳುವಂತೆ ತಿಳಿಸಿದ್ದಾರೆ. ನಮ್ಮ ಬಳಿ ಒಂದುವರೆ ಕೆಜಿ ಬಂಗಾರದ ನಾಣ್ಯಗಳಿವೆ ಪರಿಶೀಲನೆ ನಡೆಸಿ ನಮಗೆ ತಿಳಿಸಿ ಎಂದು ಹೇಳಿದ್ದಾರೆ.
ಅದರಂತೆ ಮೈಸೂರಿಗೆ ಮರಳಿ ನಾಣ್ಯವನ್ನು ಪರಿಶೀಲನೆ ನಡೆಸಿದಾಗ ಅಸಲಿ ಬಂಗಾರವೆಂದು ಖಾತರಿ ಮಾಡಿಕೊಂಡಿದ್ದ ಜಗದೀಶ್ಗೆ ಜೂ. 3 ರಂದು ಮತ್ತೆ ವಂಚಕರು ಕರೆ ಮಾಡಿ ಅರ್ಧ ಕೆಜಿ ಬಂಗಾರದ ನಾಣ್ಯಗಳನ್ನು ನಿಮಗೆ 10 ಲಕ್ಷ ರೂಪಾಯಿಗೆ ನೀಡುವುದಾಗಿ ಒಪ್ಪಂದ ಮಾಡಿಕೊಂಡಿದ್ದಾರೆ.
ಬಂಗಾರವನ್ನು ಪಡೆಯಬೇಕು ಎಂಬ ಆಸೆಯಿಂದ ಜಗದೀಶ್ ಅವರು, ತಮ್ಮ ಸ್ನೇಹಿತರ ಫೈನಾನ್ಸ್ ನಲ್ಲಿ ಮನೆಯ ದಾಖಲೆ ಹಾಗೂ ಶ್ಯೂರಿಟಿಗೆ ಚೆಕ್ ನೀಡಿ, 10 ಲಕ್ಷ ಸಾಲವನ್ನು ಪಡೆದುಕೊಂಡು, ತನ್ನ ಅಕ್ಕನ ಮಗ ಮನೋಜ್, ಕಾರ್ ಡ್ರೈವರ್ ರೋಹಿತ್ ಸಿಂಗ್ ಅವರೊಂದಿಗೆ ಸಾಗರದ ಜೋಗಿನ ಗದ್ದೆಗೆ ಬಂದಿದ್ದಾರೆ.
ಅಲ್ಲಿ ವಂಚಕ ಮಂಜು ಹಾಗೂ ಆತನ ಸಹಚರರು ವ್ಯವಹಾರ ನಡೆಯುತ್ತಿದ್ದ ಸಂದರ್ಭದಲ್ಲಿ 2 ಬೈಕಿನಲ್ಲಿ 4 ಜನ ಅಪರಿಚಿತರು ಜಗದೀಶ್ ಹಾಗೂ ಅವರ ತಂಡವನ್ನು ತರಾಟೆಗೆ ತೆಗೆದುಕೊಂಡು ನಿಮ್ಮ ಊರು ಯಾವುದು, ಸ್ಮಗ್ಲಿಂಗ್ ಮಾಡುತ್ತಿದ್ದಾರಾ, ಗಾಂಜಾ ಮಾರುತ್ತಿರಾ ಎಂದು ಗದರಿಸಿದ್ದಾರೆ.
ಅಷ್ಟರಲ್ಲಿ ಅಲ್ಲೇ ಇದ್ದ ಇನ್ನಿಬ್ಬರು ಯಾರೂ ಬಂದರೂ ಓಡಿರಿ ಎಂದು ಕೂಗುತ್ತಾ ಜಗದೀಶ್ ಕೈಯಲ್ಲಿದ್ದ ಹಣದ ಬ್ಯಾಗ್ ಹಾಗೂ ನಾಣ್ಯವನ್ನು, ಜಗದೀಶ್ ಹಾಗೂ ಮನೋಜ್ ಅವರ ಕೈಯಲ್ಲಿದ್ದ ಫೋನುಗಳನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ.
ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್ಐ ಪ್ರವೀಣ್ ಹಾಗೂ ಅವರ ತಂಡ ಆರೋಪಿಗಳ ಪತ್ತೆಗೆ ಕಾರ್ಯಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
