ಶಿವಮೊಗ್ಗ : ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಇಂಡೇನ್ ಗ್ಯಾಸ್ ರಿಫಿಲ್ಲಿಂಗ್ ಘಟಕಕ್ಕೆ ಎಲ್ಪಿಜಿ (LPG) ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಲಾರಿಯೊಂದು ನಗರದ ಡೈರಿ ಸರ್ಕಲ್ ಸಮೀಪ ಕೆಸರಿನಲ್ಲಿ ಸಿಲುಕಿಕೊಂಡಿದ್ದು, ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನಿಂದ LPG ಅನಿಲ ತುಂಬಿಕೊಂಡು ಬಂದಿದ್ದ ಟ್ಯಾಂಕರ್ ಮಾಚೇನಹಳ್ಳಿಯ ಇಂಡೇನ್ ಗ್ಯಾಸ್ ರಿಫಿಲ್ಲಿಂಗ್ ಘಟಕದತ್ತ ತೆರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಈ ಘಟಕದಿಂದ ಸಿಲಿಂಡರ್ಗಳಿಗೆ ಅನಿಲ ತುಂಬಿಸಿ ಸುತ್ತಮುತ್ತಲಿನ ಸುಮಾರು ಹತ್ತು ಜಿಲ್ಲೆಗಳಿಗೆ ಪೂರೈಕೆ ಮಾಡಲಾಗುತ್ತದೆ.
ಕೆಸರಿನಲ್ಲಿ ಹೂತುಹೋಗಿರುವ ಟ್ಯಾಂಕರ್ ಅನ್ನು ಹೊರತೆಗೆದಲು ಕ್ರೇನ್ ಸೇರಿದಂತೆ ವಿವಿಧ ಯಂತ್ರೋಪಕರಣಗಳ ನೆರವಿನಿಂದ ನಿರಂತರ ಕಾರ್ಯಾಚರಣೆ ನಡೆಸಲಾಗುತ್ತಿದ್ದರೂ ಯಶಸ್ಸು ದೊರೆತಿಲ್ಲ. ಟ್ಯಾಂಕರ್ನಲ್ಲಿ ಅನಿಲ ತುಂಬಿರುವ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಂಡೇನ್ ಕಂಪನಿಯ ಅಗ್ನಿಶಾಮಕ ವಾಹನವನ್ನು ಸ್ಥಳದಲ್ಲೇ ನಿಯೋಜಿಸಲಾಗಿದೆ.
ಈ ನಡುವೆ, ಡೈರಿ ಸರ್ಕಲ್ ಪ್ರದೇಶದಲ್ಲಿ ನಡೆಯುತ್ತಿರುವ ಅಂಡರ್ಪಾಸ್ ಕಾಮಗಾರಿಯ ವಿಳಂಬ ಹಾಗೂ ಅವೈಜ್ಞಾನಿಕ ಕಾಮಗಾರಿ ಕ್ರಮಗಳ ವಿರುದ್ಧ ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದ್ದು, ಇದರಿಂದಾಗಿ ಈ ಭಾಗದಲ್ಲಿ ನಿರಂತರವಾಗಿ ಸಣ್ಣ-ದೊಡ್ಡ ಅವಘಡಗಳು ಸಂಭವಿಸುತ್ತಿವೆ ಎಂದು ಆರೋಪಿಸಿದ್ದಾರೆ.
ಇತ್ತೀಚಿನ ಮಳೆಯಿಂದ ಸರ್ವಿಸ್ ರಸ್ತೆ ಸಂಪೂರ್ಣ ಕೆಸರಿನಿಂದ ಆವೃತವಾಗಿದ್ದು, ಭಾರೀ ವಾಹನಗಳ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದೆ. ರಸ್ತೆ ನಿರ್ವಹಣೆಯ ನಿರ್ಲಕ್ಷ್ಯವೇ ಟ್ಯಾಂಕರ್ ಸಿಲುಕಿಕೊಳ್ಳಲು ಪ್ರಮುಖ ಕಾರಣವಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
