ದಾವಣಗೆರೆ: ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಪದತ್ಯಾಗ ಮಾಡಿದ ಬೆನ್ನಲ್ಲೇ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ಆಗ್ತಿವೆ. ಜೂನ್ 3ರಂದು ಡಿ.ಕೆ. ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಅವರೊಂದಿಗೆ ಸಂಭಾವ್ಯ ಸಚಿವರು ಕೂಡ ಸಚಿವರಾಗಿ ಪದಗ್ರಹಣ ಮಾಡಲಿದ್ದಾರೆ.
ಈ ನಡುವೆ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ ಅವರಿಗೆ ವೀರಶೈವ ಲಿಂಗಾಯತದ ಕೋಟಾದಡಿ ಸಚಿವ ಸ್ಥಾನದ ಬದಲಾಗಿ ಡಿಸಿಎಂ ಸ್ಥಾನ ನೀಡಬೇಕೆಂಬ ಕೂಗು ಕೇಳಿಬರುತ್ತಿದೆ.
ಎಸ್.ಎಸ್. ಮಲ್ಲಿಕಾರ್ಜುನ ಅವರು ದಾವಣಗೆರೆ ಮತ್ತು ಮಧ್ಯ ಕರ್ನಾಟಕದ ನಾಯಕ. ಅವರಿಗೆ ಡಿಸಿಎಂ ಸ್ಥಾನ ನೀಡಲೇಬೇಕೆಂದು ಮನವಿ ಮಾಡ್ತಿದ್ದಾರೆ. ಮತ್ತೊಂದೆಡೆ, ಹೊನ್ನಾಳಿ ಶಾಸಕ ಡಿ. ಜಿ. ಶಾಂತನಗೌಡ ಹಾಗೂ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಚನ್ನಗಿರಿ ಶಾಸಕ, ಡಿ.ಕೆ. ಶಿವಕುಮಾರ್ ಅವರ ಪರಮಾಪ್ತ ಶಿವಗಂಗಾ ಬಸವರಾಜ್ ಅವರಿಗೆ ಮಂತ್ರಿಗಿರಿ ನೀಡಬೇಕೆಂಬ ಕೂಗು ಪ್ರಬಲವಾಗಿ ಕೇಳಿಬರುತ್ತಿದೆ.
ದಿ. ಶಾಮನೂರು ಶಿವಶಂಕರಪ್ಪ ಅವರ ಪುತ್ರ ಎಸ್.ಎಸ್ ಮಲ್ಲಿಕಾರ್ಜುನ್ ಅವರು 1994, 1999, 2013, 2023 ಒಟ್ಟು ನಾಲ್ಕು ಬಾರಿ ದಾವಣಗೆರೆ ಉತ್ತರ ಮತಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. 2023ರಲ್ಲಿ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದಲ್ಲಿ ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಅನುಭವವುಳ್ಳ ರಾಜಕಾರಣಿ ಆಗಿದ್ದು, ಡಿ.ಕೆ. ಶಿವಕುಮಾರ್ ಸರ್ಕಾರದಲ್ಲಿ ಅವರಿಗೆ ಡಿಸಿಎಂ ಸ್ಥಾನ ಕೊಡಲೇಬೇಕು. ಮಲ್ಲಿಕಾರ್ಜುನ್ ಮಧ್ಯ ಕರ್ನಾಟಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಅಭಿಮಾನಿಗಳು, ಬೆಂಬಲಿಗರು ಮನವಿ ಮಾಡಿದ್ದಾರೆ.
ಹೊನ್ನಾಳಿ-ನ್ಯಾಮತಿ ವಿಧಾನಸಭಾ ಕ್ಷೇತ್ರದಿಂದ ಹಾಲಿ ಶಾಸಕರಾಗಿರುವ ಡಿ.ಜಿ. ಶಾಂತನಗೌಡ್ರು ಮೂರು ಬಾರಿ ಗೆದ್ದಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಕೂಗು ಕೇಳಿ ಬರುತ್ತಿದೆ. ಡಿ.ಕೆ. ಶಿವಕುಮಾರ್ ಅವರ ಸಚಿವ ಸಂಪುಟದಲ್ಲಿ ಅವಕಾಶ ನೀಡುವಂತೆ ಬೆಂಬಲಿಗರು ಮನವಿ ಮಾಡುತ್ತಿದ್ದಾರೆ. ಬೆಂಬಲಿಗರು ಹಾಕಿರುವ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಡಿ.ಕೆ. ಶಿವಕುಮಾರ್ ಬಲಗೈ ಬಂಟ ಶಾಸಕ ಶಿವಗಂಗಾ ಬಸವರಾಜ್ಗೆ ಸಚಿವ ಸ್ಥಾನ ನೀಡಬೇಕೆಂದು ಚನ್ನಗಿರಿ ತಾಲೂಕಿನ ತಾವರೆಗೆರೆ ಗ್ರಾಮ ತಾವರೆಗೆರೆ ಶಿಲಾಮಠದ ಡಾ. ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಆಗ್ರಹಿಸಿದ್ದಾರೆ. ಶಿವಗಂಗಾ ಬಸವರಾಜ್ಗೆ ಸಚಿವ ಸ್ಥಾನ ನೀಡುವಂತೆ ಆಪ್ತರು ಹಾಗೂ ಸ್ವಾಮೀಜಿ ಮನವಿ ಮಾಡ್ತಿದ್ದಾರೆ.
