ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಹಲವು ಮರಳು ಕ್ವಾರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದ್ದಾರೆ. ಹೊಸನಗರ, ಸಾಗರ, ತೀರ್ಥಹಳ್ಳಿ, ಭದ್ರಾವತಿ, ಶಿವಮೊಗ್ಗ ತಾಲೂಕಿನಲ್ಲಿ ಲೋಕಾಯುಕ್ತ ದಾಳಿಯಾಗಿದೆ.
ಭದ್ರಾವತಿಯ ನಿಂಬೆಗೊಂದಿ, ಮಂಗೋಟೆ, ಸನ್ಯಾಸಿ ಕೊಡಮಗ್ಗಿಯಲ್ಲಿಯೂ ದಾಳಿ ಮಾಡಲಾಗಿದೆ. ಶಿವಮೊಗ್ಗದ ಹಾಡೋನಹಳ್ಳಿ, ಕೂಡಲಿ ಮತ್ತು ತೀರ್ಥಹಳ್ಳಿ ತಾಲೂಕಿನ ಮಂಡುವಳ್ಳಿ, ತೂದೂರು, ದಬ್ಬಣಗದ್ದೆ ಕ್ವಾರಿ ಮೇಲೆ ದಾಳಿಯಾಗಿದೆ.
ಹೊಸನಗರ ತಾಲೂಕಿನ ಹರಿದ್ರಾವತಿ, ಸುತ್ತಾ, ಸಂಪಕಟ್ಟೆ ಮತ್ತು ಸಾಗರದ ಆವಿನಹಳ್ಳಿಯಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಕ್ವಾರಿ ಮೇಲೆ ದಾಳಿ ಮಾಡಿ ಮರಳು ಗಣಿಗಾರಿಕೆ ಮತ್ತು ಸಂಗ್ರಹ ಪರಿಶೀಲಿಸಿದ ಅಧಿಕಾರಿಗಳು ಜೊತೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮೇಲೂ ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಕುವೆಂಪು ನಗರದಲ್ಲಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆ ಕಚೇರಿ ಮೇಲೆ ದಾಳಿ ಮಾಡಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ದಾಳಿಯಲ್ಲಿ ಶಿವಮೊಗ್ಗ ಮತ್ತು ಚಿತ್ರದುರ್ಗದ ಲೋಕಾಯುಕ್ತ ಅಧಿಕಾರಿಗಳು ಭಾಗಿಯಾಗಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣೆ ಸಂಬಂಧ ಸಾಕಷ್ಟು ದೂರು ಬಂದ ಹಿನ್ನೆಲೆ ದಾಳಿ ಮಾಡಲಾಗಿದೆ.
ಇತ್ತೀಚೆಗೆ ಕೆಡಿಪಿ ಸಭೆಯಲ್ಲೂ ಮರಳು ಅಕ್ರಮ ಸಾಗಣೆ ವಿಚಾರ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.
