ರಾಯ್ಪುರ : ದೇಶದ ಅದೆಷ್ಟೋ ಗ್ರಾಮೀಣ ಭಾಗಗಳಲ್ಲಿ ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದೆ ಜನರು ಪರದಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಛತ್ತೀಸ್ಗಢದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ.
ಮಹಿಳೆಯೊಬ್ಬಳು ಬ್ಯಾಂಕಿನಿಂದ ಪಿಂಚಣಿ ಹಣವನ್ನು ಪಡೆಯುವ ಸಲುವಾಗಿ 90 ವರ್ಷದ ಅತ್ತೆಯನ್ನು ಬೆನ್ನ ಮೇಲೆ ಹೊತ್ತುಕೊಂಡು ಸಾಗಿದ್ದಾರೆ. ಸುಡುವ ಬಿಸಿಲು, ಕಾಡಿನ ಹಾದಿ, ಕಲ್ಲು-ಮುಳ್ಳುಗಳು, ಬಂಡೆಗಳು ಮತ್ತು ನದಿಗಳ ಮೂಲಕ ಒಂದಲ್ಲ ಎರಡಲ್ಲ ಬರೋಬ್ಬರಿ 9 ಕಿ.ಮೀ. ಅತ್ತೆಯನ್ನು ಹೊತ್ತುಕೊಂಡೇ ಸಾಗಿದ್ದಾರೆ. ಇದು ಕನಿಷ್ಠ ಮೂಲಭೂತ ಸೌಕರ್ಯವೂ ಇಲ್ಲದ ಪ್ರದೇಶದ ಕರುಣಾಜನಕ ಕಥೆಯನ್ನು ತೆರೆದಿಟ್ಟಿದೆ.
ಸುರ್ಗುಜಾ ಜಿಲ್ಲೆಯ ಮೈನ್ಪತ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಮಹಿಳೆ ತನ್ನ ಅತ್ತೆಯನ್ನು ಬೆನ್ನ ಮೇಲೆ ಹೊತ್ತ ದೃಶ್ಯದ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸುಖ್ಮಾನಿಯಾ ಬಾಯಿ ಎಂದು ಗುರುತಿಸಲ್ಪಟ್ಟ ಮಹಿಳೆ ತನ್ನ ವೃದ್ಧ ಅತ್ತೆಯನ್ನು ಬ್ಯಾಂಕಿನಿಂದ ಪಿಂಚಣಿ ಪಡೆಯಲು ಸುಮಾರು 9 ಕಿ.ಮೀ. ಹೊತ್ತುಕೊಂಡೇ ನಡೆದರು.
ಅರಣ್ಯ ಪ್ರದೇಶವಾದ್ದರಿಂದ ಸೂಕ್ತ ಸಾರಿಗೆ ಸಂಪರ್ಕ ವ್ಯವಸ್ಥೆಯಿಲ್ಲ. ಗ್ರಾಮಸ್ಥರು ಮೂಲಭೂತ ಸೇವೆಗಳನ್ನು ಪಡೆಯಲು ದುರ್ಗಮ ಕಾಡು ಮತ್ತು ಹೊಳೆಗಳ ಮೂಲಕ ಕಾಲ್ನಡಿಗೆಯಲ್ಲಿ ಬಹಳ ದೂರ ಪ್ರಯಾಣಿಸಬೇಕಾಗುತ್ತದೆ.
ಪಿಂಚಣಿ ನಿಯಮಗಳ ಪ್ರಕಾರ ಹಣ ಬಿಡುಗಡೆಗೊಳಿಸುವ ಮೊದಲು ಫಲಾನುಭವಿಗಳು ಬ್ಯಾಂಕ್ಗೆ ಸ್ವತಃ ಹಾಜರಾಗಿ ಬೆರಳಚ್ಚು ಅಥವಾ ಗುರುತು ಪರಿಶೀಲನೆ ಮಾಡಿಸಬೇಕಿರುವುದರಿಂದ, ಸುಖ್ಮಾನಿಯಾ ಬಾಯಿ ಹಲವು ತಿಂಗಳಿನಿಂದ ಇದೇ ರೀತಿ ಬರುತ್ತಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಡಿಜಿಟಲ್ ಇಂಡಿಯಾ ಮತ್ತು ಕಲ್ಯಾಣ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸುವ ಬಗ್ಗೆ ಸರ್ಕಾರ ಪದೇ ಪದೆ ಹೇಳಿಕೊಂಡರೂ, ದೂರದ ಪ್ರದೇಶಗಳಲ್ಲಿರುವ ವೃದ್ಧರು ಮತ್ತು ಹಾಸಿಗೆ ಹಿಡಿದ ಪಿಂಚಣಿದಾರರು ಪ್ರಯಾಣಿಸಬೇಕಾಗಿರುವುದು ಏಕೆ ಎಂದು ಅನೇಕರು ಪ್ರಶ್ನಿಸಿದ್ದಾರೆ.
