ಬೆಂಗಳೂರು: ರಾಜ್ಯ ಸಾರಿಗೆ ನೌಕರರಿಗೆ ಕರ್ನಾಟಕ ಸರ್ಕಾರದಿಂದ ಸಿಹಿ ಸುದ್ದಿ ಸಿಕ್ಕಿದೆ. ಸಾರಿಗೆ ನಿಗಮಗಳ ನೌಕರರ ಮೂಲ ವೇತನದಲ್ಲಿ ಶೇ. 12.5 ರಷ್ಟು ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸಿದ್ದು, ಈ ನಿರ್ಧಾರದಿಂದ ಕೆಎಸ್ಆರ್ಟಿಸಿ, ಬಿಎಂಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಮತ್ತು ಕೆಕೆಆರ್ಟಿಸಿ ನಿಗಮಗಳ ಲಕ್ಷಾಂತರ ನೌಕರರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕಳೆದ ಕೆಲವು ವರ್ಷಗಳಿಂದ ಸಾರಿಗೆ ನೌಕರರು ವೇತನ ಹೆಚ್ಚಳಕ್ಕಾಗಿ ನಿರಂತರವಾಗಿ ಒತ್ತಾಯ ಮಾಡುತ್ತಿದ್ದರು. ನೌಕರರ ಸಂಘಟನೆಗಳ ಜತೆ ನಡೆಸಿದ ಸುದೀರ್ಘ ಚರ್ಚೆ ಹಾಗೂ ಆರ್ಥಿಕ ಇಲಾಖೆಯ ಸಮ್ಮತಿಯ ನಂತರ, ಸಾರಿಗೆ ಸಚಿವರು ಮತ್ತು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಈ ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. 2025 ಏಪ್ರಿಲ್ 1 ರಿಂದ ವೇತನ ಪರಿಷ್ಕರಣೆ ಅನ್ವಯ ಆಗಲಿದೆ.
ಈ ವೇತನ ಹೆಚ್ಚಳದಿಂದಾಗಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿಗಳ ಹೆಚ್ಚುವರಿ ಹೊರೆ ಬೀಳಲಿದೆ. ಆದರೆ, ಈ ನಿರ್ಧಾರಕ್ಕೆ ಸಾರಿಗೆ ನೌಕರರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ಶೇ. ಶೇ. 25ರಷ್ಟು ವೇತನ ಮಾಡಬೇಕು ಎಂದು ಪಟ್ಟುಹಿಡಿದಿದ್ದಾರೆ.
ಸಾರಿಗೆ ಸಂಘಟನೆಗಳ ಬೇಡಿಕೆಗಳೇನು?
- ಸಾರಿಗೆ ನೌಕರರ ವೇತನ ಶೇಕಡಾ 25 ರಷ್ಟು ಹೆಚ್ಚಳ ಮಾಡಬೇಕು
- 38 ತಿಂಗಳ ಹಿಂಬಾಕಿ ಹಣ, 2024ರ ಜನವರಿ 1ಕ್ಕೆ ಅನ್ವಯವಾಗುವಂತೆ ವೇತನ ಪರಿಷ್ಕರಣೆ
- 2024ರ ಜನವರಿ 1ರಿಂದ ಅನ್ವಯ ಆಗುವಂತೆ ಸಾರಿಗೆ ನೌಕರರಿಗೆ ಸಮಾನ ವೇತನ
- ಸಾರಿಗೆ ಸಂಸ್ಥೆಗಳಲ್ಲಿ ಸಂಘಗಳ ಮಾನ್ಯತೆಗಾಗಿ, ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಬೇಕು
ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ಖಚಿತ
ರಾಜ್ಯ ಸರ್ಕಾರವು ಸಾರಿಗೆ ನೌಕರರಿಗೆ ಏಕಪಕ್ಷೀಯವಾಗಿ ವೇತನ ಹೆಚ್ಚಳ ಮಾಡಿದೆ ಎಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿರುವ 12% ವೇತನ ಹೆಚ್ಚಳದ ಸುದ್ದಿ ನಿಜವೇ ಆಗಿದ್ದಲ್ಲಿ, ಇಂತಹ ಆದೇಶವನ್ನು ಜಂಟಿ ಕ್ರಿಯಾ ಸಮಿತಿ ಒಪ್ಪುವುದಿಲ್ಲ. ಒಂದು ವೇಳೆ ಸರ್ಕಾರದ ಅಧಿಕೃತ ಆದೇಶದಲ್ಲೂ ಇದೇ ಪ್ರಮಾಣದ ವೇತನ ಹೆಚ್ಚಳವಿದ್ದು, ವೇತನ ಪರಿಷ್ಕರಣೆಯ ದಿನಾಂಕವನ್ನು ನೌಕರರ ಬೇಡಿಕೆಯಂತೆ 01.01.2024 ರ ಬದಲಾಗಿ, ಹಿಂದಿನ ಆದೇಶದಂತೆ 01.04.2025 ಕ್ಕೆ ನಿಗದಿಪಡಿಸಿದ್ದರೆ, ಮುಷ್ಕರ ಅನಿವಾರ್ಯವಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಈ ಹಿಂದೆ ಕರೆ ನೀಡಿರುವಂತೆ ಮೇ 20 ರಿಂದ ನಡೆಯಲಿರುವ ಅನಿರ್ದಿಷ್ಟಾವಧಿ ಮುಷ್ಕರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಜಂಟಿ ಕ್ರಿಯಾ ಸಮಿತಿ ಸ್ಪಷ್ಟಪಡಿಸಿದೆ.
