ಉತ್ತರ ಕನ್ನಡ: ಜಿಲ್ಲೆಯ ಕಾರವಾರ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಯಾಣದ ಶಿಲೆಗಳಿಗೆ ಇದೀಗ ರಾಷ್ಟ್ರೀಯ ಮಟ್ಟದ ಗೌರವ ದೊರೆತಿದೆ. ವಿಶಿಷ್ಟ ಸುಣ್ಣದ ಏಕಶಿಲಾ ರಚನೆಗಳಾಗಿ ಪ್ರಸಿದ್ಧವಾಗಿರುವ ಯಾಣದ ಶಿಲೆಗಳನ್ನು ಭಾರತೀಯ ಭೂವೈಜ್ಞಾನಿಕ ಸಮೀಕ್ಷೆ (GSI) ‘ರಾಷ್ಟ್ರೀಯ ಮಹತ್ವದ ಭೂಪಾರಂಪರಿಕ ತಾಣ’ (Geo-Heritage Site) ಎಂದು ಅಧಿಕೃತವಾಗಿ ಘೋಷಿಸಿದೆ.
ಕೇಂದ್ರ ಗಣಿ ಸಚಿವಾಲಯದ ಅಧೀನದಲ್ಲಿರುವ ಜಿಎಸ್ಐ ಸಂಸ್ಥೆ, ಈ ಅಪರೂಪದ ನೈಸರ್ಗಿಕ ವೈಶಿಷ್ಟ್ಯವನ್ನು ಗುರುತಿಸಿ, ದೇಶದ ಪ್ರಮುಖ ಭೂಪಾರಂಪರಿಕ ತಾಣಗಳ ಪಟ್ಟಿಗೆ ಯಾಣವನ್ನು ಸೇರಿಸಿದೆ. ಇದರಿಂದ ಯಾಣದ ಸಂರಕ್ಷಣೆಗೂ, ಅಂತರರಾಷ್ಟ್ರೀಯ ಪ್ರವಾಸೋದ್ಯಮಕ್ಕೂ ಹೊಸ ಉತ್ತೇಜನ ಸಿಗಲಿದೆ.
ಜಿಎಸ್ಐಯ 176ನೇ ಸಂಸ್ಥಾಪನಾ ದಿನದ ಅಂಗವಾಗಿ ಮಾರ್ಚ್ 6, 2026ರಂದು ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತು ಜಿಎಸ್ಐ ಮಹಾನಿರ್ದೇಶಕ ಅಸಿತ್ ಸಹಾ ಅವರು ಏಪ್ರಿಲ್ 13ರಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಅಧಿಕೃತ ಪತ್ರ ಬರೆದು, ಯಾಣದ ಸಂರಕ್ಷಣೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದರೊಂದಿಗೆ, ಯಾಣ ಪ್ರದೇಶದಲ್ಲಿ ಸುಸ್ಥಿರ ‘ಭೂ-ಪ್ರವಾಸೋದ್ಯಮ’ (Geo-tourism) ಅಭಿವೃದ್ಧಿಗೆ ಅವಕಾಶಗಳು ವಿಸ್ತರಿಸಲಿದ್ದು, ಈ ಅಪೂರ್ವ ನೈಸರ್ಗಿಕ ಸಂಪತ್ತಿನ ಉಳಿವಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗುವ ನಿರೀಕ್ಷೆಯಿದೆ.
