ದಾವಣಗೆರೆ: ಮಠದ ಲೆಕ್ಕ ಕೊಡಿ ಅಭಿಯಾನ ತೀವ್ರಗೊಳ್ಳುತ್ತಿರುವ ನಡುವೆ ಹರಿಹರದ ವೀರಶೈವ ಲಿಂಗಾಯತ ಪಂಚಮ ಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿಯನ್ನು ಪೀಠದಿಂದ ಉಚ್ಛಾಟಿಸಲಾಗಿದೆ ಎಂದು ವರದಿ ತಿಳಿಸಿದೆ.
ಸೋಮವಾರ ಗುರುಪೀಠದಲ್ಲಿ ನಡೆದ ಧರ್ಮದರ್ಶಿಗಳ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ಒಟ್ಟು 15ಮಂದಿ ಇರುವ ಧರ್ಮದರ್ಶಿಗಳ ಸಭೆಯಲ್ಲಿ ಮೂವರು ಗೈರುಹಾಜರಾಗಿದ್ದು,ಉಪಸ್ಥಿತರಿದ್ದ 12 ಮಂದಿ ಸದಸ್ಯರು ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಛಾಟಿಸುವ ಸರ್ವಾನುಮತದದ ನಿರ್ಧಾರ ತೆಗೆದುಕೊಂಡಿದ್ದಾರೆ.
ಸಭೆ ಕರೆಯುವ ಏಳು ದಿನಗಳ ಮೊದಲು ಧರ್ಮದರ್ಶಿ ಸಮಿತಿ ಸದಸ್ಯರಿಗೆ ನೋಟಿಸ್ ನೀಡಬೇಕು. ಆದರೆ ತಡರಾತ್ರಿ ಬಂದು ಸ್ವಾಮೀಜಿಗಳು ಇದ್ದ ಮಠದ ಬಾಗಿಲಿಗೆ ನೋಟಿಸ್ ಅಂಟಿಸಿ ಹೋಗಿದ್ದಾರೆ. ಅಲ್ಲದೇ ಸ್ವಾಮೀಜಿ ವಿರುದ್ಧ ಇರುವ ಆರೋಪಗಳ ಕುರಿತು ವಿವರಗಳನ್ನು ಸಮಿತಿ ನೀಡಬೇಕು ಎಂದು ಸಂಸ್ಥಾಪಕ ಟ್ರಸ್ಟಿ ಎಚ್.ಪಿ.ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನನ್ನ ಉಚ್ಛಾಟನೆ ಹಾಸ್ಯಾಸ್ಪದ: ವಚನಾನಂದ ಶ್ರೀ
ನನ್ನ ವಿರುದ್ಧ ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ಉಚ್ಛಾಟನೆ ಮಾಡಿದ್ದಾರೆಂದು ವಚನಾನಂದ ಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ಟ್ರಸ್ಟಿನ ಧರ್ಮದರ್ಶಿಗಳೇ ಪೋರ್ಜರಿ ಸಹಿ ಮಾಡಿದ್ದಾರೆ. ನಾನು ಟ್ರಸ್ಟಿನ ಧರ್ಮದರ್ಶಿಗಳ ಬಳಿ ಲೆಕ್ಕಾಚಾರ ಕೇಳಿದ ಮೇಲೆ ಈ ಆರೋಪ ಆರಂಭವಾಗಿದೆ. ಮಠ ನಮ್ಮದು, ಸ್ವಾಮೀಜಿ ಏಕೆ ಮಠ ಬಿಟ್ಟು ಹೋಗಬೇಕು. ನಾನು ಎಲ್ಲವನ್ನೂ ಭಕ್ತರಿಗೆ ಬಿಟ್ಟುಬಿಟ್ಟಿದ್ದೇನೆ. ಶ್ವಾಸಪೀಠ ಮತ್ತು ನನ್ನ ಹೆಸರಿನಲ್ಲಿ ಒಂದಿಂಚೂ ಭೂಮಿ ಇಲ್ಲ. ನಾನು ಎಲ್ಲವನ್ನೂ ಸಮಾಜಕ್ಕೆ ಕೊಟ್ಟಿದ್ದೇನೆ ಎಂದು ವಚನಾನಂದ ತಿಳಿಸಿದ್ದಾರೆ.
