ಸಾಗರ: ನಗರಸಭೆಯಿಂದ ನಲ್ಲಿ ರಿಪೇರಿ ಮಾಡಲು ಬಂದಿದ್ದೇವೆಂದು ನಂಬಿಸಿ ಸುಮಾರು 12 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ಬೆಳ್ಳಿ ಆಭರಣ ದೋಚಿಕೊಂಡು ಪರಾರಿಯಾದ ಘಟನೆ ಶ್ರೀಧರ ನಗರದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ಪ್ರಭಾಕರ್ ಎಂ. ಹೆಗಡೆ ಎಂಬುವವರ ಮನೆಯ ನಲ್ಲಿಯಲ್ಲಿ ನೀರು ಸರಿ ಬರುತ್ತಿರಲಿಲ್ಲ. ಪ್ರಭಾಕರ್ ಸಾಕಷ್ಟು ಬಾರಿ ನಗರಸಭೆಗೆ ಹೋಗಿ ರಿಪೇರಿಗೆ ಮನವಿ ಮಾಡಿ ಬಂದಿದ್ದರು. ಏ. 3ರಂದು ಇಬ್ಬರು ಅಪರಿಚಿತರು ಹೆಲ್ಮೆಟ್ ಧರಿಸಿಕೊಂಡು ಪ್ರಭಾಕರ್ ಮನೆಗೆ ಬಂದಿದ್ದಾರೆ. ಪ್ರಭಾಕರ್ ಅವರ ಹತ್ತಿರ ನಿಮ್ಮ ಮನೆಯ ನಲ್ಲಿ ರಿಪೇರಿ ಇದೆ ಎಂದು ಹೇಳಿದ್ದೀರಲ್ಲಾ, ನಾವು ನಗರಸಭೆಯಿಂದ ಬಂದಿದ್ದೇವೆ ಎಂದು ನಂಬಿಸಿದ್ದಾರೆ.
ಪ್ರಭಾಕರ್ ಅವರು ಅಪರಿಚಿತರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ನಲ್ಲಿ ತೋರಿಸಿದ್ದಾರೆ. ಅವರಲ್ಲಿ ಒಬ್ಬ ಪ್ರಭಾಕರ್ ಅವರನ್ನು ಟೆರಸ್ ಮೇಲೆ ಕರೆದುಕೊಂಡು ಹೋಗಿದ್ದಾನೆ. ಇನ್ನೊಬ್ಬ ಕೆಳಗೆ ಇದ್ದು ನಲ್ಲಿಯನ್ನು ಪರೀಕ್ಷೆ ಮಾಡುತ್ತಿದ್ದನು. ಸ್ವಲ್ಪ ಹೊತ್ತಿನ ನಂತರ ಟೆರಸ್ನಲ್ಲಿದ್ದ ವ್ಯಕ್ತಿ ನಿಮ್ಮ ಹೆಂಡತಿಯನ್ನು ಮೇಲೆ ಕರೆಯಿರಿ ಎಂದು ತಿಳಿಸಿದ್ದು, ಪ್ರಭಾಕರ್ ಹೆಂಡತಿಯನ್ನು ಟೆರೆಸ್ಗೆ ಕರೆದುಕೊಂಡು ಬಂದಿದ್ದಾರೆ.
ಸುಮಾರು ಅರ್ಧ ಗಂಟೆ ರಿಪೇರಿ ಮಾಡಿ ಇಬ್ಬರೂ ಸರಿಯಾಗಿದೆ ಎಂದು ಹೋಗಿದ್ದಾರೆ. ಕೆಲಕಾಲದ ನಂತರ ಪ್ರಭಾಕರ್ ಅವರಿಗೆ ಅನುಮಾನ ಬಂದು ಗಾಡ್ರೇಜ್ ಪರಿಶೀಲನೆ ಮಾಡಲು ಹೆಂಡತಿಗೆ ಹೇಳಿದ್ದಾರೆ. ಆಗ ಕಪಾಟಿನಲ್ಲಿದ್ದ ಸುಮಾರು ೧೧.೬ ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, ಹಾಗೂ ಬೆಳ್ಳಿ ಲೋಟ ಕಳ್ಳತನವಾಗಿರುವುದು ಗೊತ್ತಾಗಿದೆ. ಕೂಡಲೇ ಪ್ರಭಾಕರ್ ನಗರಠಾಣೆಗೆ ದೂರು ನೀಡಿದ್ದಾರೆ.
