Trending

ಅಂತೂ ಪ್ರಚಾರಕ್ಕೆ ಬಂದ ಜಮೀರ್ : ತಣ್ಣಗಾದ ಮುನಿಸು

Spread the love

ದಾವಣಗೆರೆ: ಮುಸ್ಲಿಮರಿಗೆ ಟಿಕೆಟ್ ಕೈತಪ್ಪಿದ್ದ ಮುನಿಸಿಕೊಂಡು ಕ್ಷೇತ್ರದ ಚುನಾವಣೆಯಿಂದ ದೂರ ಉಳಿದಿದ್ದ ಸಚಿವ ಜಮೀರ್ ಅಹಮದ್ ಖಾನ್ ರವಿವಾರ‌ ಅಖಾಡಕ್ಕೆ ಭೇಟಿ ನೀಡಿ ಟಿಕೆಟ್ ವಿಚಾರವಾಗಿ ತಮಗೆ ಯಾವುದೇ ಅಸಮಾಧಾನವಿಲ್ಲ, ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂಬ ಸಂದೇಶ ಸಾರಿದರು.

ಮುಖ್ಯಮಂತ್ರಿಯವರ ಸೂಚನೆ ಮೇರೆಗೆ ರವಿವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಜಮೀರ್ ಅಹಮದ್, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ನಿವಾಸಕ್ಕೆ ಭೇಟಿ ನೀಡಿ, ಮುಸ್ಲಿಂ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಕ್ಯಾಮರಾಗಳಿಗೆ ಒಗ್ಗಟ್ಟು ಪ್ರದರ್ಶಿಸಿ, ತೆರಳಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್, ನಾನು ಕೇರಳದ ಚುನಾವಣಾ ಕೆಲಸದಲ್ಲಿದ್ದೆ. ಪಕ್ಷದ ಸ್ಟಾರ್ ಪ್ರಚಾರಕನಾಗಿದ್ದು 10 ಜಿಲ್ಲೆಗಳ ಜವಾಬ್ದಾರಿ ನೀಡಿದ್ದರು. ಹಾಗಾಗಿ ಇಲ್ಲಿ ಬರಲು ಆಗಿರಲಿಲ್ಲ. ಮುಖ್ಯಮಂತ್ರಿಯವರು ಏ. 5ಕ್ಕೆ ದಾವಣಗೆರೆ ಪ್ರಚಾರಕ್ಕೆ ಹೋಗಲು ಸೂಚಿಸಿದ್ದರಿಂದ ಬಂದಿದ್ದೇನೆ. ಅಭ್ಯರ್ಥಿ ಸಮರ್ಥ್ ಅವರ ಪ್ರಚಾರಕ್ಕಾಗಿ ಬಂದಿದ್ದೇನೆ ಎಂದರು.

ಮಾಧ್ಯಮಗಳ ಸೃಷ್ಟಿ

ಟಿಕೆಟ್ ವಿಚಾರವಾಗಿ ನಾನು ಮುನಿಸಿಕೊಂಡಿದ್ದೇನೆ ಎಂದು ಯಾರು ಹೇಳಿದ್ದು? ಅದು ಮಾಧ್ಯಮಗಳ ಸೃಷ್ಟಿ. ನಾನು ಯಾವತ್ತೂ ಮುನಿಸಿಕೊಂಡಿಲ್ಲ. ನಾಮಪತ್ರ ಸಲ್ಲಿಕೆ ದಿನ ನಾನು ಮುಖ್ಯಮಂತ್ರಿಯವರೊಂದಿಗೆ ಬರಬೇಕಾಗಿತ್ತು. ಆದರೆ, ವಿಧಾನಸಭೆಯಲ್ಲಿ ನಾನು ಉತ್ತರಿಸಬೇಕಾದ ಮೂರು ಪ್ರಶ್ನೆಗಳಿದ್ದವು. ಆ ಕಾರಣಕ್ಕೆ ಬರಲಿಲ್ಲ. ಅಂದೇ ನಾನು ಚುನಾವಣೆ ಪ್ರಚಾರಕ್ಕೆ ಹೋಗುತ್ತೇನೆ. ಸಮರ್ಥನನ್ನು ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಮಾಧ್ಯಮಗಳಿಗೆ ಹೇಳಿದ್ದೆ ಎಂದರು.

[pj-news-ticker]