Trending

ಹರಿಯಾಣದ ರೈತನ ಮಗಳ ಮದುವೆ ಸಮಾರಂಭದಲ್ಲಿ ಭಾಗಿಯಾದ ರಾಹುಲ್​ ಗಾಂಧಿ

Spread the love

ಚಂಡೀಗಢ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ ಹರಿಯಾಣದ ಸೋನಿಪತ್ ಜಿಲ್ಲೆಯ ಮದೀನಾ ಗ್ರಾಮದಲ್ಲಿ ರೈತ ಕುಟುಂಬವೊಂದರ ಮದುವೆ ಸಂಭ್ರಮದಲ್ಲಿ ಭಾಗಿಯಾಗುವ ಮೂಲಕ ಗಮನ ಸೆಳೆದಿದ್ದಾರೆ.

ಎರಡು ವರ್ಷಗಳ ಹಿಂದೆ ತಾವೇ ನೀಡಿದ್ದ ಮಾತಿನಂತೆ, ರೈತ ಸಂಜಯ್ ಮಲಿಕ್ ಅವರ ಮಗಳ ವಿವಾಹ ಮಹೋತ್ಸವಕ್ಕೆ ಆಗಮಿಸಿ ಶುಭ ಹಾರೈಸಿದರು.

2023ರ ಜುಲೈನಲ್ಲಿ ರಾಹುಲ್ ಗಾಂಧಿ ಅವರು ಅನಿರೀಕ್ಷಿತವಾಗಿ ಮದೀನಾ ಗ್ರಾಮಕ್ಕೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ಗದ್ದೆಯಲ್ಲಿ ಇಳಿದು ರೈತ ಸಂಜಯ್ ಅವರೊಂದಿಗೆ ಭತ್ತ ನಾಟಿ ಮಾಡಿದ್ದ ರಾಹುಲ್, ಟ್ರ್ಯಾಕ್ಟರ್ ಓಡಿಸಿ ರೈತರ ಬವಣೆಯನ್ನು ಆಲಿಸಿದ್ದರು. ಅಂದು ಸಂಜಯ್ ಕುಟುಂಬದ ಕಷ್ಟ-ಸುಖದಲ್ಲಿ ಭಾಗಿಯಾಗುವುದಾಗಿ ಭರವಸೆ ನೀಡಿದ್ದ ‘ಜನನಾಯಕ’, ಇಂದು ಆ ಕುಟುಂಬದ ಮಗಳ ಮದುವೆಗೆ ಸಾಕ್ಷಿಯಾಗುವ ಮೂಲಕ ತಮ್ಮ ಸರಳತೆಯನ್ನು ಮೆರೆದಿದ್ದಾರೆ.

ಬಿಳಿ ಟಿ-ಶರ್ಟ್ ಮತ್ತು ಹಸಿರು ಟ್ರೌಸರ್ ಧರಿಸಿ ಸಾಧಾರಣವಾಗಿ ಆಗಮಿಸಿದ ರಾಹುಲ್ ಅವರಿಗೆ ರೈತ ಕುಟುಂಬವು ಸಾಂಪ್ರದಾಯಿಕವಾಗಿ ‘ಪೇಟ’ ತೊಡಿಸಿ ಗೌರವಿಸಿತು. ಹರಿಯಾಣದ ಗ್ರಾಮೀಣ ಶೈಲಿಯ ಭೋಜನ ಸವಿದ ಅವರು, ಮದುವೆಗೆ ಬಂದಿದ್ದ ಗ್ರಾಮಸ್ಥರೊಂದಿಗೆ ಆತ್ಮೀಯವಾಗಿ ಸಂವಹನ ನಡೆಸಿದರು. ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಇತರ ಕಾಂಗ್ರೆಸ್ ನಾಯಕರು ಈ ವೇಳೆ ಉಪಸ್ಥಿತರಿದ್ದರು.

[pj-news-ticker]