ನ್ಯೂಯಾರ್ಕ್: ಅಮೆರಿಕದ ಕುಖ್ಯಾತ ಲೈಂಗಿಕ ಹಗರಣ ಎಪ್ ಸ್ಟೀನ್ ಫೈಲ್ಸ್ ನಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವ ಬಗ್ಗೆ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಕ್ಷಮೆಯಾಚಿಸಿದ ಬೆನ್ನಲ್ಲೇ ವಿಶ್ವ ಆರ್ಥಿಕ ಮಂಡಳಿಯ ಸಿಇಒ ಬೋರ್ಜ್ ಬ್ರೆಂಡೆ ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ವರದಿ ತಿಳಿಸಿದೆ.
ದಿವಂಗತ ಜೆಫ್ರಿ ಎಪ್ ಸ್ಟೀನ್ ಜತೆ ಸಂಬಂಧ ಹೊಂದಿದ ಆರೋಪದಡಿ ತನಿಖೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ತಾನು ಹುದ್ದೆಯನ್ನು ತ್ಯಜಿಸಿರುವುದಾಗಿ ಬ್ರೆಂಡೆ ತಿಳಿಸಿದ್ದಾರೆ.
ಅಮೆರಿಕದ ನ್ಯಾಯಾಂಗ ಇಲಾಖೆ ಬಹಿರಂಗಗೊಳಿಸಿದ ದಾಖಲೆಯಲ್ಲಿ ಬೋರ್ಜ್ ಬ್ರೆಂಡೆ ಅವರು ಎಪ್ ಸ್ಟೀನ್ ಜತೆ ಮೂರು ಬಾರಿ ವ್ಯವಹಾರದ ಭೋಜನ ಕೂಟದಲ್ಲಿ ಭಾಗಿಯಾಗಿದ್ದಲ್ಲದೇ, ಮೇಲ್ ಹಾಗೂ ಟೆಕ್ಸ್ಟ್ ಸಂದೇಶ ಕಳುಹಿಸಿರುವುದು ಬಯಲಾಗಿತ್ತು.
“ನಾನು ವಿಶ್ವ ಆರ್ಥಿಕ ಮಂಡಳಿಯ ಅಧ್ಯಕ್ಷ ಮತ್ತು ಸಿಇಒ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದೇನೆ. ಎಂಟೂವರೆ ವರ್ಷಗಳ ಕಾಲ ಇಲ್ಲಿ ಕಳೆದ ನನ್ನ ಸಮಯವು ಅತ್ಯಂತ ಪ್ರತಿಫಲದಾಯಕವಾಗಿದೆ” ಎಂದು ಬ್ರೆಂಡೆ ಗುರುವಾರ (ಫೆ.26) ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಆದರೆ ಬೋರ್ಜ್ ಬ್ರೆಂಡೆ ಅವರು ತಮ್ಮ ಹೇಳಿಕೆಯಲ್ಲಿ ಎಪ್ ಸ್ಟೀನ್ ಆರೋಪವನ್ನು ಉಲ್ಲೇಖಿಸಿಲ್ಲ, ನನ್ನ ಗೈರು ಹಾಜರಿಯ ಹೊರತಾಗಿಯೂ ವಿಶ್ವ ಆರ್ಥಿಕ ಮಂಡಳಿಯ ಕಾರ್ಯಗಳು ಸುಗಮವಾಗಿ ಮುಂದುವರಿಯಲಿ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
