Trending

ಶಿರಸಿ ಮಾರಿ ಜಾತ್ರೆ : ಪಟ್ಟದ ಕೋಣನಿಗೆ ರಾಜಾತಿಥ್ಯ

Spread the love

ಶಿರಸಿ : ಶಕ್ತಿ ದೇವತೆಗಳ ಜಾತ್ರೆ ಎಂದರೆ ಸಾಮಾನ್ಯವಾಗಿ ಪ್ರಾಣಿ ಬಲಿಯ ಆಚರಣೆ ನೆನಪಾಗುತ್ತದೆ. ಆದರೆ ಶಿರಸಿಯ ಮಾರಿಕಾಂಬಾ ಜಾತ್ರೆ ಅದಕ್ಕೆ ಸಂಪೂರ್ಣ ಭಿನ್ನ. ಇಲ್ಲಿ ಪ್ರಾಣಿಬಲಿಗೆ ಬದಲಾಗಿ ಪಟ್ಟದ ಕೋಣಕ್ಕೆ ರಾಜ ಮರ್ಯಾದೆ ನೀಡುವ ವಿಶಿಷ್ಟ ಸಂಪ್ರದಾಯ ನಡೆದುಬರುತ್ತಿದೆ.

ಫೆಬ್ರವರಿ 24ರಿಂದ ಮಾರ್ಚ್ 4ರವರೆಗೆ ನಡೆಯಲಿರುವ ದ್ವೈವಾರ್ಷಿಕ ಜಾತ್ರೆಯಲ್ಲಿ ಪಟ್ಟದ ಕೋಣ ಪ್ರಮುಖ ಆಕರ್ಷಣೆಯಾಗಿದೆ. ದೇವಾಲಯದ ಗರ್ಭಗುಡಿಯ ಸಮೀಪವೇ ವಿಶೇಷ ಆರೈಕೆ ಪಡೆಯುವ ಈ ಬಲಿಷ್ಠ ಕೋಣವು ಭಕ್ತರ ಭಕ್ತಿ–ಭಾವದ ಕೇಂದ್ರವಾಗಿದೆ.

ದೇವಿಯ ವಿವಾಹ ಮಹೋತ್ಸವದ ಅಂಗವಾಗಿ ಕಂಕಣ ಧಾರಣೆಯ ವಿಧಿ ವಿಧಾನಗಳು ಪೂರ್ಣಗೊಂಡ ಬಳಿಕ, ಪಟ್ಟದ ಕೋಣವನ್ನು ಅಲಂಕರಿಸಿ ನಗರದ ವಿವಿಧ ಬಡಾವಣೆಗಳಲ್ಲಿ ಮೆರವಣಿಗೆ ಕರೆದೊಯ್ಯಲಾಗುತ್ತದೆ. ತಮಟೆ, ನಾದಸ್ವರಗಳ ಘೋಷದಲ್ಲಿ ಸಾಗುವ ಈ ಮೆರವಣಿಗೆಯಲ್ಲಿ ಭಕ್ತರು ನೀರೆರೆದು, ಕುಂಕುಮ ಹಚ್ಚಿ, ಅಕ್ಕಿ–ಕಾಯಿಗಳನ್ನು ಅರ್ಪಿಸಿ ಪೂಜೆ ಸಲ್ಲಿಸುತ್ತಾರೆ.

ಜನಪದ ಕತೆಯ ಪ್ರಕಾರ, ಈ ಕೋಣವೇ ಮಾತೆ ಮಾರಿಕಾಂಬೆಯ ಗಂಡನ ರೂಪ. ಧರ್ಮವಿರುದ್ಧವಾಗಿ ನಡೆದುಕೊಂಡ ಗಂಡನನ್ನು ಕೊಲ್ಲುವ ಮೊದಲು ಆತ ತಂತ್ರವಿದ್ಯೆಯಿಂದ ಕೋಣದ ರೂಪ ತಾಳಿದನೆಂಬ ನಂಬಿಕೆ ಇದೆ. ಆದ್ದರಿಂದ ಇದನ್ನು ‘ವರನ ಮೆರವಣಿಗೆ’ ಎಂದೂ ಕರೆಯಲಾಗುತ್ತದೆ.

ಸಂಪ್ರದಾಯದಂತೆ ಮೇತ್ರಿ ಕುಟುಂಬದವರೇ ಕೋಣವನ್ನು ಊರು ಸುತ್ತಿಸಬೇಕು. ಕೋಣವನ್ನು ನಿಯಂತ್ರಿಸಲು 8–10 ಜನರ ಸಹಕಾರ ಅಗತ್ಯವಿರುತ್ತದೆ. ಐದು ದಿನಗಳ ಕಾಲ ಮನೆ ಮನೆಗೆ ತೆರಳಿ ಬಾಳೆಹಣ್ಣು, ಅಕ್ಕಿ, ಎಣ್ಣೆ, ತರಕಾರಿ ಮೊದಲಾದ ನೈವೇದ್ಯಗಳನ್ನು ಸ್ವೀಕರಿಸುತ್ತದೆ. ಮನೆಮುಂದೆ ಬಂದ ಕೋಣದ ಮೈಗೆ ಎಣ್ಣೆ ಹಾಗೂ ತಂಪು ನೀರನ್ನು ಸವರಿ ಭಕ್ತರು ಆಶೀರ್ವಾದ ಪಡೆಯುತ್ತಾರೆ.

ಜಾತ್ರೆ ಮುಗಿದ ನಂತರ ಪಟ್ಟದ ಕೋಣವನ್ನು ಮರಳಿ ದೇವಾಲಯದ ಆಶ್ರಯಕ್ಕೆ ಕರೆದೊಯ್ಯಲಾಗುತ್ತದೆ. ಬಿಳಿಮಿಶ್ರಿತ ಕಪ್ಪು ಬಾಲ ಹಾಗೂ ನೇರ ಕೊಂಬುಳ್ಳ ಕೋಣವಾಗಿರಬೇಕು ಎಂಬುದು ಸಂಪ್ರದಾಯ. ಹರಕೆಯ ಸಲುವಾಗಿ ತಂದು ಒಪ್ಪಿಸುವ ಕೋಣಗಳನ್ನೂ ದೇವಾಲಯ ಸಮಿತಿಯೇ ಸಾಕುತ್ತದೆ.

[pj-news-ticker]