ಭದ್ರಾವತಿ: ವಿಶೇಷ ಚೇತನ ಮಕ್ಕಳು ಸಮಾಜದ ಅಮೂಲ್ಯ ಸಂಪತ್ತಾಗಿದ್ದು, ಅವರಿಗೆ ದೇವರು ನೀಡಿರುವ ವಿಶೇಷ ಶಕ್ತಿಯನ್ನು ಗುರುತಿಸಿ ಉತ್ತೇಜಿಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಳೇನಗರ ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಹಾಗೂ ಹಿರಿಯ ಪತ್ರಕರ್ತ ಕಣ್ಣಪ್ಪ ಹೇಳಿದರು.
ನಗರದ ಹಳೇನಗರ ಪತ್ರಿಕಾಭವನದಲ್ಲಿ ಮಂಗಳವಾರ ಅಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟ, ಸರ್.ಎಂ.ವಿ ದ್ವಿಚಕ್ರ ವಾಹನ ದುರಸ್ತಿದಾರರ ಸಂಘ ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ವಿಶೇಷ ಚೇತನ ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತು ಹಾಸಿಗೆ ಚಾದರಗಳ ವಿತರಣೆ ಹಾಗೂ ಕಾರ್ಮಿಕರಿಗೆ ಕ್ಯಾಲೆಂಡರ್ ಹಂಚುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಮಕ್ಕಳ ಆರೈಕೆ ಪೋಷಕರಿಗೆ ಸವಾಲಾಗಿದ್ದರೂ, ಅವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸಿದರೆ ಅದ್ಭುತ ಸಾಧನೆ ಸಾಧ್ಯವೆಂದು ಹೇಳಿದರು.
ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ವಿ.ಎಚ್. ಪಂಚಾಕ್ಷರಿ ಮಾತನಾಡಿ, ಅನೇಕ ವಿಶೇಷ ಚೇತನರು ತಮ್ಮ ಸಾಧನೆಯ ಮೂಲಕ ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಉದಾಹರಣೆಗಳಿವೆ. ಇಂತಹ ಮಕ್ಕಳನ್ನು ಮಮತೆ, ಸಹಾನುಭೂತಿ ಮತ್ತು ಗೌರವದಿಂದ ಬೆಳೆಸಿದಾಗ ಮಾತ್ರ ಅವರ ಭವಿಷ್ಯ ಉಜ್ವಲವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ತಾಲೂಕು ಅಧ್ಯಕ್ಷ ತ್ಯಾಗೂ(ಪರಮೇಶ್) ಅಧ್ಯಕ್ಷತೆವಹಿಸಿದ್ದರು. ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಕೆ. ಸುಂದರ್ ಬಾಬು ಪ್ರಾಸ್ತಾವಿಕ ನುಡಿಗಳನ್ನಾಡಿದರು. ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಂಗಾನಾಯ್ಕ ಗೊಂದಿ, ಗಾಂಧಿನಗರದ ವೇಳಾಂಗಣಿ ಆರೋಗ್ಯಮಾತೆ ದೇವಾಲಯದ ಧರ್ಮಗರು ಪಾದರ್ ಸ್ಟೀವನ್ ಡೇಸಾ, ನಗರಸಭೆ ಸದಸ್ಯ ಬಸವರಾಜ ಬಿ ಆನೇಕೊಪ್ಪ, ಕಾರ್ಮಿಕ ಮುಖಂಡ ಎಚ್. ರವಿಕುಮಾರ್, ಕಾರ್ಮಿಕ ನಿರೀಕ್ಷಕರಾದ ರಕ್ಷಿತ್, ಸುಪ್ರಿಯಾ,
ಅಖಿಲ ಕರ್ನಾಟಕ ಕಟ್ಟಡ ಹಾಗು ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾಧ್ಯಕ್ಷ ಕೆ. ಸಂಜಯ್ ಕುಮಾರ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಕವಿತಾ, ಮಹಾದೇವಾಚಾರ್, ಬಾಬಣ್ಣ, ರಾಜೇಶ್ವರಿ, ಪುಷ್ಪ, ಪ್ರಭುಮೇಸ್ತ್ರಿ, ಸುಂದರ್, ಜಗದೀಶ್, ಕೃಷ್ಣ ರಾಯ್ಕರ್, ಚಂದ್ರ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿಜಯ್ ಸಾರಥಿ ಕಾರ್ಯಕ್ರಮ ನಿರೂಪಿಸಿದರು.

