ಕೋಲಾರ: ಸಿಎಂ ಹುದ್ದೆ ಹಂಚಿಕೆ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಏನು ಹೇಳಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮಾತ್ರ ತಿಳಿದಿದೆ, ಹೀಗಾಗಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಹೈಕಮಾಂಡ್ ಬಳಿ ಇದೆ ಎಂದು ಹಿರಿಯ ಕಾಂಗ್ರೆಸ್ ನಾಯಕ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ಮುನಿಯಪ್ಪ ಹೇಳಿದರು.
ಕೆಜಿಎಫ್ ಬಳಿಯ ಪ್ರಸಿದ್ಧ ಕೋಟಿಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ತಮ್ಮ ಪುತ್ರಿ ಹಾಗೂ ಕೆಜಿಎಫ್ ಶಾಸಕಿ ರೂಪ ಕಲಾ ಶಶಿಧರ್ ಅವರೊಂದಿಗೆ ಪ್ರಾರ್ಥನೆ ಸಲ್ಲಿಸಿ ಮಾತನಾಡಿದರು.
ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಚೆನ್ನಾಗಿದೆ, ಮುಖ್ಯಮಂತ್ರಿ ತಮ್ಮ ದಾಖಲೆಯ 17 ನೇ ಬಜೆಟ್ ಮಂಡಿಸಲಿದ್ದಾರೆ ಮತ್ತು ಹೈಕಮಾಂಡ್ ಏನು ಹೇಳಿದೆ ಎಂದು ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಗೆ ಮಾತ್ರ ತಿಳಿದಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ಹೈಕಮಾಂಡ್ಗೆ ಸೂಚಿಸಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಮುನಿಯಪ್ಪ, ಈ ವಿಷಯದಲ್ಲಿ ಸ್ಪಷ್ಟ ಸಂದೇಶ ನೀಡುವಂತೆ ರಾಜ್ಯ ಉಸ್ತುವಾರಿ ಸುರ್ಜೀವಲಾ ಅವರಿಗೆ ಹೇಳಿದ್ದೇನೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷದ ಹಿತಾಸಕ್ತಿ ಹೆಚ್ಚು ಮುಖ್ಯವಾಗಿದೆ ಹೀಗಾಗಿ ರಾಷ್ಟ್ರಮಟ್ಟದ ಹಿರಿಯ ಕಾಂಗ್ರೆಸ್ ನಾಯಕರಲ್ಲಿ ಸುರ್ಜೀವಾಲಾ ಒಬ್ಬರಾಗಿರುವುದರಿಂದ ಅವರ ಬಳಿ ಈ ಸಂಬಂಧ ಚರ್ಚಿಸಿದ್ದೇನೆ ಎಂದರು.
ದಲಿತ ಮುಖ್ಯಮಂತ್ರಿ ಕುರಿತು ಮಾತನಾಡಿದ ಮುನಿಯಪ್ಪ, ಸೂಕ್ತ ಸಮಯದಲ್ಲಿ ಈ ವಿಷಯವನ್ನು ಹೈಕಮಾಂಡ್ನೊಂದಿಗೆ ಚರ್ಚಿಸಲಾಗುವುದು. ಇದು ದೀರ್ಘಕಾಲದ ಬೇಡಿಕೆಯಾಗಿದೆ ಎಂದು ಹೇಳಿದರು. 136 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದದ್ದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಒಬಿಸಿ ಎಂದು ಅವರು ಹೇಳಿದರು.
