ಶಿವಮೊಗ್ಗ: ಸಾಮಾಜಿಕ ಜಾಲತಾಣದಲ್ಲಿ ರಾಹುಲ್ ಗಾಂಧಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಅಪ್ತ ಸಹಾಯಕನಿಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಮಳಲಿ ಗ್ರಾಮದ ನಿವಾಸಿ, ಶಾಸಕರ ಆಪ್ತ ಸಹಾಯಕ ರಾಜೇಶ್ ಹಿರಿಮನೆ ಬಂಧಿತ ಆರೋಪಿ. ಹೊಸನಗರ ಜೆಎಂಎಫ್ ಸಿ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿ, ಆದೇಶಿಸಿದೆ.
ಸಮನ್ಸ್ ನೀಡಿದರೂ ಕೋರ್ಟ್ ಗೆ ಹಾಜರಾಗದೆ ನಿರ್ಲಕ್ಷ್ಯ ಮಾಡಿದ್ದ ರಾಜೇಶ್ ವಿರುದ್ದ ಕೋರ್ಟ್ ದಂಡ ಸಹಿತ ವಾರಂಟ್ ಜಾರಿ ಮಾಡಿ ಆದೇಶಿಸಿತ್ತು. ಪ್ರಕರಣದಲ್ಲಿ ಜಾಮೀನು ಪಡೆಯದ ಹಿನ್ನೆಲೆ ನ್ಯಾಯಾಂಗ ಬಂಧನಕ್ಕೆ ವಿಧಿಸಿ ಕೋರ್ಟ್ ಆದೇಶಿಸಿದೆ.
ಹಿನ್ನೆಲೆ
ರಾಹುಲ್ ಗಾಂಧಿ ಮುಖದ ಅರ್ಧ ಭಾಗ ಹಾಗೂ ಪಾಕಿಸ್ತಾನ ಸೇನೆ ಸಮವಸ್ತ್ರ ಧರಿಸಿದ ಅಧಿಕಾರಿ ಅಸಿಮ್ ರ ಅರ್ಧ ಫೋಟೊ ಎಡಿಟ್ ಮಾಡಿ ಹಾಕಿದ್ದ ರಾಜೇಶ್ 2025 ರ ಮೇ 20 ರಂದು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಎಡಿಟ್ ಮಾಡಿದ್ದ ಫೋಟೋಗೆ ‘ONE AGENDA’ ಎಂದು ಟ್ಯಾಗ್ ಲೈನ್ ಹಾಕಿದ್ದರು.
ಈ ಸಂಬಂಧ ನಗರ ಠಾಣೆ ಪೊಲೀಸರು ಬಿಎನ್ ಎಸ್ ಸೆಕ್ಷನ್ 353(2) ಅಡಿ ಸುಮೋಟೊ ಕೇಸ್ ಹಾಕಿದ್ದರು.
