ಧಾರವಾಡ: ಕರ್ನಾಟಕ ವಿದ್ಯಾವರ್ಧಕ ಸಂಘವು ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ಅಂಗವಾಗಿ ನೀಡುವ ಮಹಿಳಾ ಗ್ರಂಥ ಬಹುಮಾನ-2024ನೇ ಸಾಲಿನ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಸಾಹಿತ್ಯದ ನಾಲ್ಕು ಪ್ರಕಾರಗಳಿಂದ ಆಯ್ಕೆ ಮಾಡಲಾಗಿದೆ.
ಈ ಆಯ್ಕೆಗಾಗಿ ಬಂದ ಲೇಖಕಿಯರ ವಿವಿಧ ಸಾಹಿತ್ಯ ಪ್ರಕಾರಗಳ 121 ಕೃತಿಗಳಲ್ಲಿ ಕಥೆ/ಕಾದಂಬರಿ, ಕವನ ಸಂಕಲನ ಹಾಗೂ ಇತರೆ ಪ್ರಕಾರಗಳಿದ್ದು, ಇದರಲ್ಲಿ ನಾಲ್ಕು ವಿಭಾಗದಲ್ಲಿ ಶ್ರೇಷ್ಠ ಕನ್ನಡ ಕೃತಿಗಳನ್ನು ನಿರ್ಣಾಯಕರ ಸಮಿತಿ ಆಯ್ಕೆ ಮಾಡಿದೆ. ಈ ಪ್ರತಿ ಬಹುಮಾನಿತ ಕೃತಿಗೆ 15 ಸಾವಿರ ರೂ.ಗಳನ್ನು ಬಹುಮಾನವಾಗಿ ನೀಡಿ ಪ್ರಶಸ್ತಿ ಫಲಕದೊಂದಿಗೆ ಲೇಖಕಿಯರನ್ನು ಸನ್ಮಾನಿಸಿ, ಗೌರವಿಸಲಾಗುವುದು.
ಬಹುಮಾನ ಪಡೆದ ಲೇಖಕಿಯರು ಮತ್ತು ಕೃತಿಗಳ ಪಟ್ಟಿ ಇಂತಿದೆ.
ಕವನ ಸಂಕಲನದಿಂದ ಶಿವಮೊಗ್ಗದ ಸವಿತಾ ನಾಗಭೂಷಣ ಅವರ ದಿನದ ಪ್ರಾರ್ಥನೆ (ಕವನ ಸಂಕಲನ) ಮತ್ತು ಡಾ. ಕಾತ್ಯಾಯಿನಿ ಕುಂಜಿಬೆಟ್ಟು (ಉಡುಪಿ) ಅವರ ತಂಬೂರಿ (ಕವನ ಸಂಕಲನ) ಆಯ್ಕೆಗೊಂಡಿವೆ. ಕಥಾ ಸಂಕಲನದಲ್ಲಿ ಬೆಂಗಳೂರಿನ ರೇಣುಕಾ ಕೋಡಗುಂಟಿ ಅವರ ಚಿಗುರೊಡೆದ ಬೇರು (ಕಥಾ ಸಂಕಲನ), ಕಾದಂಬರಿಯಲ್ಲಿ ಮೈಸೂರಿನ ಡಾ. ಗೀತಾ ಸೀತಾರಾಮ ಅವರ ಮಾಳ್ವ ಸಾಮ್ರಾಜ್ಯದ ರಾಜಯೋಗಿನಿ ಅಹಲ್ಯಾಬಾಯಿ ಹೋಳ್ಕರ್ (ಕಾದಂಬರಿ) ಹಾಗೂ ಶಿವಮೊಗ್ಗದ ಡಾ. ಕೆ.ಎಸ್. ಪವಿತ್ರಾ ಅವರ ಧೀ ತನನ (ಕಲೆ-ಸಾಹಿತ್ಯ-ಮನಸ್ಸು) ಆಯ್ಕೆಗೊಂಡಿವೆ.
ಕಳೆದ 20 ವರ್ಷಗಳಿಂದ ಸಂಘವು ನೀಡುತ್ತಾ ಬಂದಿದ್ದು, ಮಹಿಳಾ ಸಾಹಿತ್ಯದ ನಾಲ್ಕು ಪ್ರಕಾರಗಳಿಗೆ ಪ್ರಾಶಸ್ತ್ಯ ನೀಡಿದೆ. ಪ್ರಸಕ್ತ ಬಹುಮಾನಗಳನ್ನು ಮಾರ್ಚ್ ಮೊದಲ ವಾರದಲ್ಲಿ ಸಂಘದಲ್ಲಿ ನೀಡಿ ಗೌರವಿಸಲಾಗುವುದು ಎಂದು ಕವಿಸಂನ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
