ವಾಷಿಂಗ್ಟನ್ : ವಲಸೆಯನ್ನು ಹತ್ತಿಕ್ಕುವ ವ್ಯಾಪಕ ಪ್ರಯತ್ನಗಳ ಭಾಗವಾಗಿ, ಅಮೆರಿಕ 2025ರಲ್ಲಿ 1 ಲಕ್ಷಕ್ಕೂ ಹೆಚ್ಚು ವೀಸಾಗಳನ್ನು ರದ್ದುಗೊಳಿಸಿದೆ. ಇದರಲ್ಲಿ ಸುಮಾರು 8,000 ವಿದ್ಯಾರ್ಥಿಗಳ ವೀಸಾಗಳು ಸೇರಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.
ಇದೊಂದು ದಾಖಲೆ ಸಂಖ್ಯೆಯ ವೀಸಾ ರದ್ದತಿ ಆಗಿದ್ದು, 2024ರಲ್ಲಿ ಅಧ್ಯಕ್ಷರಾಗಿದ್ದ ಜೋ ಬೈಡನ್ ಅವರ ಆಡಳಿತದ ಕೊನೆಯ ವರ್ಷದಲ್ಲಿ ರದ್ದುಗೊಂಡ ವೀಸಾಗಳ ಸಂಖ್ಯೆಯ ಎರಡು ಪಟ್ಟು ಹೆಚ್ಚು.
ರದ್ದುಗೊಂಡ ವೀಸಾಗಳಲ್ಲಿ ಸುಮಾರು 8,000 ವಿದ್ಯಾರ್ಥಿ ವೀಸಾಗಳು ಮತ್ತು ಕ್ರಿಮಿನಲ್ ಚಟುವಟಿಕೆಗೆ ಸಂಬಂಧಿಸಿದಂತೆ ಅಮೆರಿಕದ ಕಾನೂನು ಜಾರಿ ಸಂಸ್ಥೆಗಳೊಂದಿಗೆ ಈ ಹಿಂದೆ ಮುಖಾಮುಖಿಯಾಗಿದ್ದ 2,500 ವಿಶೇಷ ವೀಸಾಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಅಮೆರಿಕವನ್ನು ಸುರಕ್ಷಿತವಾಗಿಡಲು ನಾವು ಈ ಗೂಂಡಾಗಳನ್ನು ಗಡೀಪಾರು ಮಾಡುವುದನ್ನು ಮುಂದುವರಿಸುತ್ತೇವೆ ಎಂದು ಸರ್ಕಾರ ಹೇಳಿದೆ. ಟ್ರಂಪ್ ವಿದೇಶಿ ಪ್ರಜೆಗಳ ಪರಿಶೀಲನೆಯನ್ನು ಬಿಗಿಗೊಳಿಸಿದ ಕಾರ್ಯಕಾರಿ ಆದೇಶದ ನಂತರ ವೀಸಾ ರದ್ದತಿಯಲ್ಲಿ ಹೆಚ್ಚಳ ಕಂಡುಬಂದಿದೆ. 2024ರಲ್ಲಿ ಸುತ್ತಮುತ್ತ 40,000 ವೀಸಾಗಳನ್ನು ರದ್ದು ಮಾಡಲಾಗಿತ್ತು. 2025ರಲ್ಲಿ ಹೆಚ್ಚು ಪ್ರಮಾಣದಲ್ಲಿ ರದ್ದತಿಯಾದ ವೀಸಾಗಳು ವ್ಯಾಪಾರ ಮತ್ತು ಪ್ರವಾಸಿ ವೀಸಾಗಳಾಗಿದ್ದು, ಅವರೆಲ್ಲ ವೀಸಾ ಅವಧಿ ಮುಗಿದ ನಂತರವೂ ಅಲ್ಲಿಯೇ ಉಳಿದುಕೊಂಡಿದ್ದರು.
ವಿಶೇಷ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಪ್ರಕರಣ ಕುಡಿದು ವಾಹನ ಚಲಾಯಿಸಿದ ಬಂಧನಗಳಿಗೆ ಸಂಬಂಧಿಸಿದೆ. ಜತೆಗೆ ಇತರರ ಮೇಲೆ ಹಲ್ಲೆ, ಕಳ್ಳತನ, ಮಕ್ಕಳ ಮೇಲಿನ ದೌರ್ಜನ್ಯ, ಮಾದಕವಸ್ತು ಸಂಬಂಧಿತ ಅಪರಾಧಗಳು, ವಂಚನೆ ಮತ್ತು ದುರುಪಯೋಗವನ್ನು ಒಳಗೊಂಡಿವೆ.
ವರದಿ ಪ್ರಕಾರ, ಸುಮಾರು 500 ವಿದ್ಯಾರ್ಥಿಗಳು ಮಾದಕ ವಸ್ತುಗಳನ್ನು ಹೊಂದಿರುವುದು ಹಾಗೂ ವಿತರಣೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ತಮ್ಮ ವೀಸಾಗಳನ್ನು ಕಳೆದುಕೊಂಡಿದ್ದಾರೆ.
ಅದೇ ವೇಳೆ, ಮಕ್ಕಳ ಮೇಲಿನ ದೌರ್ಜನ್ಯ ಆರೋಪಗಳ ಹಿನ್ನೆಲೆ ನೂರಾರು ವಿದೇಶಿ ಕಾರ್ಮಿಕರಿಂದ ವೀಸಾಗಳನ್ನು ರದ್ದುಪಡಿಸಲಾಗಿದೆ.
ʼʼಟ್ರಂಪ್ ಆಡಳಿತವು ಅಮೆರಿಕ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿಯುವುದನ್ನು ಬಯಸುತ್ತದೆ ಮತ್ತು ಸಾರ್ವಜನಿಕ ಸುರಕ್ಷತೆ ಅಥವಾ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನುಂಟು ಮಾಡುವ ವಿದೇಶಿ ಪ್ರಜೆಗಳಿಂದ ನಮ್ಮ ರಾಷ್ಟ್ರವನ್ನು ರಕ್ಷಿಸುತ್ತದೆʼʼ ಎಂದು ಅಮೆರಿಕ ರಾಜ್ಯ ಆಡಳಿತದ ಪ್ರಧಾನ ಉಪ ವಕ್ತಾರ ಟಾಮಿ ಪಿಗ್ಗಾಟ್ ಹೇಳಿದರು.
