Trending

 ಸಾಗರ : ಶರಾವತಿ ಹಿನ್ನೀರಿನಲ್ಲಿ ಈಜುವಾಗ ಮುಳುಗಿ ಪಶು ವೈದ್ಯಾಧಿಕಾರಿ ಸಾವು

Spread the love

 ಸಾಗರ : ಕುಟುಂಬ ಸಮೇತ ಶರಾವತಿ ಹಿನ್ನೀರಿಗೆ ಔಟಿಂಗ್‌ಗೆ ತೆರಳಿದ್ದ ಸಂದರ್ಭದಲ್ಲಿ ಈಜಲು ಇಳಿದ ಪಶು ವೈದ್ಯಾಧಿಕಾರಿ ನೀರಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ನಡೆದಿದೆ.

ಮಾಸೂರಿನಲ್ಲಿ  ಹಿರಿಯ ಪಶು ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಸುನೀಲ್ (38) ಅವರು ಸಾಗರ ತಾಲ್ಲೂಕಿನ ಹಕ್ರೆಯ ಬಾಳೇಗೆರೆ ಗ್ರಾಮದ ಬಳಿಯ ಶರಾವತಿ ಹಿನ್ನೀರಿಗೆ ಕುಟುಂಬದೊಂದಿಗೆ ವಿಹಾರಕ್ಕೆ ಬಂದಿದ್ದರು.

ಈಜು ತಿಳಿದಿದ್ದ ಡಾ. ಸುನೀಲ್ ಅವರು ಹಿನ್ನೀರಿನಲ್ಲಿ ಈಜಲು ಇಳಿದಿದ್ದು, ಸುಮಾರು 20 ಮೀಟರ್ ದೂರ ಈಜಿ ಹೋದ ನಂತರ ಹಿಂದಿರುಗಲು ಪ್ರಯತ್ನಿಸಿದ ವೇಳೆ ಆಯಾಸಗೊಂಡು ನೀರಿನಲ್ಲೇ ಮುಳುಗಿದ್ದಾರೆ ಎನ್ನಲಾಗಿದೆ.

ನೀರಿನ ಮಧ್ಯದಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿ ಡಾ. ಸುನೀಲ್ ಅವರು ಕುಟುಂಬಸ್ಥರ ಕಣ್ಣೆದುರೆಯೇ ಸಾವನ್ನಪ್ಪಿದ್ದಾರೆ. ನಂತರ ಅಗ್ನಿಶಾಮಕ ಸಿಬ್ಬಂದಿಗಳು ಮೃತದೇಹವನ್ನು ನೀರಿನಿಂದ ಹೊರತೆಗೆದಿದ್ದಾರೆ.

ಮೃತದೇಹವನ್ನು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ. ಡಾ. ಸುನೀಲ್ ಅವರು ಸೊರಬ ತಾಲ್ಲೂಕಿನ ಹೊರಬೈಲು ಗ್ರಾಮದ ನಿವಾಸಿಯಾಗಿದ್ದು, ಮೃತರ ಪತ್ನಿಯೂ ವೈದ್ಯರಾಗಿದ್ದಾರೆ. ಇವರಿಗೆ ಇಬ್ಬರು ಪುತ್ರಿಯರಿದ್ದು, ಕಿರಿಯ ಪುತ್ರಿಗೆ ಒಂದೂವರೆ ವರ್ಷ ವಯಸ್ಸು ಎನ್ನಲಾಗಿದೆ. ಅಕಾಲಿಕ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಈ ಸಂಬಂಧ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

[pj-news-ticker]