ಶಿವಮೊಗ್ಗ: ಬೀದಿ ಬದಿ ಎಳನೀರು ವ್ಯಾಪಾರಿಯೊಬ್ಬರು ಸ್ವಚ್ಛತೆ ಕಾಪಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದರಿಂದ ಅಪಘಾತಕ್ಕೂ ಕಾರಣವಾದ ಘಟನೆ ನಗರದಲ್ಲಿ ನಡೆದಿದೆ. ನಗರದ ಶುಭಮಂಗಳ ಕಲ್ಯಾಣ ಮಂದಿರದ ಎದುರಿನ ಖಾಲಿ ಜಾಗದಲ್ಲಿ ವ್ಯಾಪಾರಿಯು ಎಳನೀರು ಸಿಪ್ಪೆ ಹಾಗೂ ಬುರುಡೆಗಳನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರಿಂದ ಸುತ್ತಮುತ್ತಲ ವಾತಾವರಣ ತಿಪ್ಪೆಯಂತಾಗಿತ್ತು.
ಎಳನೀರಿನಲ್ಲಿ ಉಳಿದ ಗಂಜಿ ತಿನ್ನಲು ಹಸುಗಳು ಬಂದು ಕಸವನ್ನು ಇನ್ನಷ್ಟು ಹರಡುತ್ತಿದ್ದವು. ಈ ಕುರಿತು ಪಾಲಿಕೆ ಅಧಿಕಾರಿಗಳು ಹಲವು ಬಾರಿ ಎಚ್ಚರಿಕೆ ನೀಡಿದರೂ ವ್ಯಾಪಾರಿಯು ಗಮನ ಹರಿಸಿರಲಿಲ್ಲ. ಇತ್ತೀಚೆಗೆ ಬೈಕ್ನಲ್ಲಿ ತೆರಳುತ್ತಿದ್ದ ವ್ಯಕ್ತಿಯೊಬ್ಬರು ಜಾರಿ ಬಿದ್ದು ಗಾಯಗೊಂಡ ಹಿನ್ನೆಲೆಯಲ್ಲಿ ಪಾಲಿಕೆಗೆ ದೂರು ನೀಡಲಾಗಿತ್ತು.
ಇದರಿಂದ ಬೇಸತ್ತ ಪಾಲಿಕೆ ಅಧಿಕಾರಿಗಳು ವ್ಯಾಪಾರಿಗೆ ಪಾಠ ಕಲಿಸುವ ಉದ್ದೇಶದಿಂದ ಕಸವನ್ನು ತಂದು ಅವರ ವ್ಯಾಪಾರದ ಸ್ಥಳದಲ್ಲೇ ಸುರಿದರು. ಇದರಿಂದ ದಾರಿ ಕಾಣದೆ ವ್ಯಾಪಾರಿಯು ಎಳನೀರು ಮಾರಾಟ ನಿಲ್ಲಿಸಿ ಸ್ವತಃ ಕಸವನ್ನು ಸ್ವಚ್ಛಗೊಳಿಸಿದ್ದಾನೆ.
