ಶಿವಮೊಗ್ಗ: ಗಿಫ್ಟ್ ಬರುತ್ತದೆ ಎಂಬ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ವಂಚಕರು ಶಿಕಾರಿಪುರದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,80,590 ರೂ. ಹಣ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.
ಸೆಪ್ಟೆಂಬರ್ 26ರಂದು ಅಪರಿಚಿತ ವ್ಯಕ್ತಿಯೊಬ್ಬರು ದೂರವಾಣಿ ಕರೆ ಮಾಡಿ, ತಾವು ಮುಂಬೈ ಕಸ್ಟಮ್ಸ್ ಇಲಾಖೆಯ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾರೆ. ನೈಜೀರಿಯಾದಿಂದ ಬೆಲೆಬಾಳುವ ಗಿಫ್ಟ್ ಬಂದಿದೆ, ಅದನ್ನು ಬಿಡುಗಡೆ ಮಾಡಲು ಸರ್ವೀಸ್ ಚಾರ್ಜ್ ಹಾಗೂ ತೆರಿಗೆ ಪಾವತಿಸಬೇಕೆಂದು ನಂಬಿಸಿದ್ದಾರೆ.
ಇದನ್ನು ನಿಜವೆಂದು ನಂಬಿದ ದೂರುದಾರರು ಸೆಪ್ಟೆಂಬರ್ 27ರಿಂದ ಅಕ್ಟೋಬರ್ 2ರವರೆಗೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ 2,80,590 ರೂ. ವರ್ಗಾಯಿಸಿದ್ದಾರೆ. ಬಳಿಕ ಮತ್ತಷ್ಟು ಹಣ ಪಾವತಿಸುವಂತೆ ಒತ್ತಡ ಬಂದಾಗ ಅನುಮಾನಗೊಂಡು ವಿಚಾರಿಸಿದಾಗ ವಂಚನೆ ನಡೆದಿರುವುದು ತಿಳಿದುಬಂದಿದೆ.
ಈ ಹಿಂದೆ ಶ್ರೀರಾಮಪುರದ ಮಹಿಳೆಯೊಬ್ಬರೂ ಇದೇ ರೀತಿಯ ಗಿಫ್ಟ್ ವಂಚನೆಗೆ ಒಳಗಾಗಿ 2.35 ಲಕ್ಷ ರೂ. ಕಳೆದುಕೊಂಡಿದ್ದರು. ಪ್ರಕರಣ ಸಂಬಂಧ ಶಿವಮೊಗ್ಗದ ಸಿಇಎನ್ (CEN) ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
