Trending

ಸಾಗರ ತಾಲ್ಲೂಕಿನ ತ್ಯಾಗರ್ತಿಯಲ್ಲಿ ಒಂಟಿ ಸಲಗ ಪ್ರತ್ಯಕ್ಷ – ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ

Spread the love

ಸಾಗರ: ತಾಲ್ಲೂಕು ವ್ಯಾಪ್ತಿಯ ತ್ಯಾಗರ್ತಿ ಅರಣ್ಯ ಪ್ರದೇಶದಲ್ಲಿ ಒಂಟಿ ಸಲಗವೊಂದು ಪ್ರತ್ಯಕ್ಷವಾಗಿದೆ ಎಂದು ಅರಣ್ಯ ಇಲಾಖೆಯ ಮೂಲಗಳು ದೃಢಪಡಿಸಿವೆ. ಸಲಗವನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮರಳಿ ಕಾಡಿನತ್ತ ಓಡಿಸುವ ಕಾರ್ಯಾಚರಣೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದಾರೆ.

ಕೆಲ ದಿನಗಳ ಹಿಂದೆ ಉಳವಿ ಹೋಬಳಿ ವ್ಯಾಪ್ತಿಗೆ ಜೋಡಿ ಕಾಡಾನೆಗಳು ಆಗಮಿಸಿ ರೈತರ ಬೆಳೆಗಳಿಗೆ ಹಾನಿ ಮಾಡಿದ್ದವು. ಅವುಗಳನ್ನು ದೂಗೂರಿನಿಂದ ಕಾನಹಳ್ಳಿ–ಕಣ್ಣೂರು ಮಾರ್ಗವಾಗಿ ಚಿಕ್ಕಲವತ್ತಿ ಕಡೆಗೆ ಓಡಿಸಲಾಗಿದ್ದು, ನಂತರ ಅಂಬಲಗೋಡು ಡ್ಯಾಂ ಭಾಗದತ್ತ ಕಾರ್ಯಾಚರಣೆ ಮುಂದುವರಿದಿದೆ.

ಈ ನಡುವೆ, ಜೋಡಿ ಆನೆಗಳು ತೆರಳಿದ ಮಾರ್ಗದ ಬಳಿಯಲ್ಲೇ ಒಂಟಿ ಸಲಗ ಇತ್ತ ಪ್ರವೇಶಿಸಿದೆ ಎನ್ನಲಾಗುತ್ತಿದೆ. ಕರ್ಜಿಕೊಪ್ಪದಲ್ಲಿ ಹುಚ್ಚಪ್ಪ ಎಂಬುವರ ಗದ್ದೆಯಲ್ಲಿ ಸಲಗ ಹಾದುಹೋಗಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿವೆ. ಅಲ್ಲಿಂದ ಕಣ್ಣೂರು–ತ್ಯಾಗರ್ತಿ ಪ್ರದೇಶಗಳಲ್ಲಿ ಸಲಗ ಅಲೆದಾಡುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪರಿಸ್ಥಿತಿಯ ಹಿನ್ನೆಲೆ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಅರಣ್ಯ ಇಲಾಖೆ ಮನವಿ ಮಾಡಿದೆ. ಉಳವಿ ಹೋಬಳಿ ವ್ಯಾಪ್ತಿಗೆ ಸಲಗ ಪ್ರವೇಶಿಸದಂತೆ ಹಾಗೂ ಅದನ್ನು ಬಂದ ದಾರಿಯಲ್ಲೇ ಮರಳಿ ಕಾಡಿನತ್ತ ಓಡಿಸಲು ಸೊರಬ ಮತ್ತು ಸಾಗರ ತಾಲ್ಲೂಕಿನ ಅರಣ್ಯ ಇಲಾಖೆ ಸಂಯುಕ್ತ ಕಾರ್ಯಾಚರಣೆ ನಡೆಸುತ್ತಿದೆ.

[pj-news-ticker]