2025ರಲ್ಲಿ ಭಾರತದಲ್ಲಿ ದೊಡ್ಡ ಗೆಲುವು ಪಡೆದ ಸಿನಿಮಾಗಳ್ಯಾವುವು ಎಂದರೆ, ಕಾಂತಾರ ಚಾಪ್ಟರ್ 1, ಛಾವಾ, ಸೈಯಾರ ಮುಂತಾದ ಸಿನಿಮಾಗಳ ಹೆಸರುಗಳನ್ನೇ ನಾವು ಹೇಳುತ್ತೇವೆ. ಆದರೆ ಇಲ್ಲೊಂದು ಸಿನಿಮಾ ಸದ್ದಿಲ್ಲದೇ ದೊಡ್ಡ ಗೆಲುವು ಕಂಡಿದೆ.
ಲಾಭದ ಪ್ರಮಾಣ ನೋಡಿದರೆ, ಕಾಂತಾರ, ಛಾವಾಗಿಂತ ಈ ಸಿನಿಮಾವೇ ದೊಡ್ಡದು! ಅಷ್ಟಕ್ಕೂ ಯಾವುದು ಆ ಸಿನಿಮಾ? ʻಲಾಲೂ – ಕೃಷ್ಣ ಸದಾ ಸಹಾಯತೆʼ!
ಯಾವುದಪ್ಪ ಈ ಸಿನಿಮಾ? ಇದರ ಹೆಸರನ್ನೇ ನಾವು ಕೇಳಿಲ್ಲವಲ್ಲ ಎಂದುಕೊಳ್ಳುಬಹುದು. ಇದು ಗುಜರಾತಿ ಸಿನಿಮಾ. ಅಕ್ಟೋಬರ್ 10ರಂದು ತೆರೆಕಂಡಿದ್ದ ಈ ಸಿನಿಮಾವು ಈವರೆಗೂ ಗಳಿಸಿರುವುದು ಬರೋಬ್ಬರಿ 79 ಕೋಟಿ ರೂ.! ಅರೇ, ಕಾಂತಾರ ಚಾಪ್ಟರ್ 1 ಸಿನಿಮಾವು 900 ಕೋಟಿ ರೂ. ವರೆಗೂ ಗಳಿಕೆ ಮಾಡಿದೆ. ಅದ್ಹೇಗೆ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಗೆಲುವು ದೊಡ್ಡದಾಗುತ್ತದೆ ಎನ್ನುತ್ತೀರಾ? ಅದಕ್ಕೂ ಉತ್ತರ ಇಲ್ಲಿದೆ.
ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾಕ್ಕೆ ಖರ್ಚಾಗಿರುವುದು ಬರೀ 50 ಲಕ್ಷ ರೂ.ಗಳು ಮಾತ್ರ. ಕಾಂತಾರ 1 ಚಿತ್ರದ ಬಜೆಟ್ 100 ಕೋಟಿ ಮೇಲಿದೆ!
ಹಲವು ಪಟ್ಟು ಲಾಭ
ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವು ಹಾಕಿದ ಬಂಡವಾಳಕ್ಕೆ 150 ಪಟ್ಟು ಲಾಭವನ್ನು ತಂದುಕೊಟ್ಟಿದೆ. ಆದರೆ ಕಾಂತಾರ 1 ಸಿನಿಮಾವು ಹಾಕಿದ ಬಂಡವಾಳಕ್ಕೆ 7-8 ಪಟ್ಟು ಹಣವನ್ನು ಹಿಂಗಿರುಗಿಸಿದೆ. ಛಾವಾ 9 ಪಟ್ಟು ಲಾಭ ತಂದುಕೊಟ್ಟರೆ, ಸೈಯಾರ ಚಿತ್ರವು 13 ಪಟ್ಟು ಲಾಭ ಕಂಡಿದೆ. ಹಾಗಾಗಿ, 160 ಪಟ್ಟು ಲಾಭ ತಂದುಕೊಂಡ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾವನ್ನು 2025ರ most profitable indian film ಎಂದು ಕರೆಯಲಾಗುತ್ತಿದೆ.
ಸದ್ಯ ಭಾರತದಲ್ಲೇ ಈ ಸಿನಿಮಾವು 79 ಕೋಟಿ ರೂ. ಗಳಿಸಿ ಮುನ್ನುಗ್ಗುತ್ತಿದೆ. ವಿದೇಶದಲ್ಲಿನ ಗಳಿಕೆಯನ್ನು ಸೇರಿಸಿದರೆ, ಕಲೆಕ್ಷನ್ ಪ್ರಮಾಣ ಇನ್ನೂ ಜಾಸ್ತಿ ಆಗಲಿದೆ. ಇನ್ನು, ಅತಿ ಹೆಚ್ಚು ಗಳಿಕೆ ಮಾಡಿದ ಗುಜರಾತಿ ಚಿತ್ರ ಎಂಬ ವಿಶೇಷಣಕ್ಕೂ ʻಲಾಲೂ – ಕೃಷ್ಣ ಸದಾ ಸಹಾಯತೆʼ ಸಿನಿಮಾ ಪಾತ್ರವಾಗಿದೆ. ಮೊದಲ ವಾರ ಬರೀ 33 ಲಕ್ಷ ರೂ. ಗಳಿಸಿದ್ದ ಈ ಸಿನಿಮಾವೀಗ 49 ದಿನಗಳಿಗೆ 79.10 ಕೋಟಿ ರೂ. ಬಾಚಿಕೊಂಡಿದೆ.
ಈ ಚಿತ್ರದ ಕಥೆ ಏನು?
ಫಾರ್ಮ್ಹೌಸ್ನಲ್ಲಿ ಸಿಕ್ಕಿಬಿದ್ದ ರಿಕ್ಷಾ ಚಾಲಕನೊಬ್ಬನ ಕಥೆಯನ್ನು ಈ ಸಿನಿಮಾದಲ್ಲಿ ಹೇಳಲಾಗಿದೆ. ಇದೊಂದು ಡಿವೋಷನಲ್ ಕಥಾಹಂದರವುಳ್ಳ ಸಿನಿಮಾವಾಗಿದ್ದು, ಶ್ರೀಕೃಷ್ಣನು ಹೇಗೆ ಆ ಚಾಲಕನಿಗೆ ಸಹಾಯ ಮಾಡುತ್ತಾನೆ ಎಂಬುದನ್ನು ಫ್ಯಾಂಟಸಿಯಾಗಿ ತೋರಿಸಲಾಗಿದೆ. ವಿಶೇಷವೆಂದರೆ, ಈ ಸಿನಿಮಾ ತೆರೆಕಂಡು 50 ದಿನಗಳಾಗಿದ್ದು, ಸದ್ಯ ಬೆಂಗಳೂರಿನಲ್ಲಿ 5 ಶೋಗಳು ಸಿಕ್ಕಿವೆ.
