Trending

ಭದ್ರಾವತಿಯ ವೀರಾಪುರ ಗ್ರಾಮದ ಗೋಡೌನ್‌ನಲ್ಲಿ ಅಕ್ರಮ ದಾಸ್ತಾನು ಪತ್ತೆ; 83 ಕ್ವಿಂಟಾಲ್ ಅಕ್ಕಿ, 83 ಕ್ವಿಂಟಾಲ್ ರಾಗಿ ವಶಕ್ಕೆ

Spread the love

ಭದ್ರಾವತಿ: ಗ್ರಾಮಸ್ಥರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು, ತಾಲೂಕಿನ ವೀರಾಪುರ ಗ್ರಾಮದ ಗೋಡೌನ್‌ವೊಂದರ ಮೇಲೆ ದಾಳಿ ನಡೆಸಿ 166 ಕ್ವಿಂಟಾಲ್ ಪಡಿತರ ಆಹಾರ ಧಾನ್ಯಗಳನ್ನು ಜಪ್ತಿ ಮಾಡಿದ್ದಾರೆ.

ವೀರಾಪುರ ಗ್ರಾಮದ ಹಬೀಬ್ ಖಾನ್ ಅವರಿಗೆ ಸೇರಿದ ಗೋಡೌನ್‌ನಲ್ಲಿ ಅಕ್ರಮವಾಗಿ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಈ ವೇಳೆ ಗೋಡೌನ್‌ನಲ್ಲಿ 83 ಕ್ವಿಂಟಾಲ್ ಪಡಿತರ ಅಕ್ಕಿ ಹಾಗೂ 83 ಕ್ವಿಂಟಾಲ್ ರಾಗಿ ಸೇರಿದಂತೆ ಒಟ್ಟು 166 ಕ್ವಿಂಟಾಲ್ ಧಾನ್ಯಗಳು ಪತ್ತೆಯಾಗಿವೆ.

ಭದ್ರಾವತಿ ಗ್ರಾಮಾಂತರ ಆಹಾರ ಇಲಾಖೆಯ ಆಹಾರ ನಿರೀಕ್ಷಕ ಬಸವರಾಜ್ ನೇತೃತ್ವದಲ್ಲಿ ದಾಳಿ ನಡೆಸಿ ಧಾನ್ಯಗಳನ್ನು ವಶಕ್ಕೆ ಪಡೆಯಲಾಗಿದೆ.

ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅರ್ಹ ಫಲಾನುಭವಿಗಳಿಗೆ ತಲುಪಬೇಕಾದ ಆಹಾರ ಧಾನ್ಯಗಳು ಖಾಸಗಿ ಗೋಡೌನ್‌ನಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ತನಿಖೆ ಕೈಗೊಳ್ಳಲಾಗಿದೆ.

ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಧಾನ್ಯಗಳನ್ನು ಎಲ್ಲಿಂದ ಸಂಗ್ರಹಿಸಲಾಗಿದೆ, ಗೋಡೌನ್‌ನಲ್ಲಿ ದಾಸ್ತಾನು ಮಾಡಿರುವ ಉದ್ದೇಶವೇನು ಹಾಗೂ ಪ್ರಕರಣದಲ್ಲಿ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

[pj-news-ticker]