2020ರಲ್ಲಿ ಶಿವಮೊಗ್ಗದ ಎಪಿಎಂಸಿ ಮುಂಭಾಗದ ರೇಷ್ಮೆ ಇಲಾಖೆಯ ಹಿಂಭಾಗದಲ್ಲಿ ಸ್ಟೀಫನ್ ಶ್ರೀನಿವಾಸ್ ಎಂಬುವವರು ಬೈಕ್ ಗ್ಯಾರೇಜ್ ನಡೆಸುತ್ತಿದ್ದರು.
ಅವರ ಗ್ಯಾರೇಜ್‌ನ ಹಿಂಭಾಗದಲ್ಲಿದ್ದ ಮತ್ತೊಂದು ಗ್ಯಾರೇಜ್‌ನಲ್ಲಿ ಗಣೇಶ್ (34) ಎಂಬುವವರ ಜಾಗದಲ್ಲಿ ಗಿರೀಶ್ ಗ್ಯಾರೇಜ್ ನಡೆಸುತ್ತಿದ್ದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯಿಂದ ಬಾಕ್ಸ್ ಡ್ರೈನೇಜ್ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿತ್ತು. ಕಾಮಗಾರಿಗಾಗಿ ಗ್ಯಾರೇಜ್ ಮುಂಭಾಗದ ಭಾಗವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವಾಹನಗಳ ಓಡಾಟಕ್ಕೆ ಸ್ಥಳಾವಕಾಶದ ಅಗತ್ಯ ಉಂಟಾಗಿತ್ತು.
ತಮ್ಮ ಗ್ಯಾರೇಜ್‌ಗೆ ಬೈಕ್‌ಗಳು ಬಂದು ಹೋಗಲು ಸ್ವಲ್ಪ ಜಾಗ ಬಿಡುವಂತೆ ಗಣೇಶ್ ಹಾಗೂ ಗಿರೀಶ್, ಸ್ಟೀಫನ್ ಶ್ರೀನಿವಾಸ್ ಅವರಲ್ಲಿ ಕೇಳಿಕೊಂಡಿದ್ದರು.
ಆದರೆ, ಈ ವಿಚಾರದಲ್ಲಿ ಒಪ್ಪಿಗೆ ದೊರೆಯದ ಹಿನ್ನೆಲೆಯಲ್ಲಿ ಇಬ್ಬರೂ ಸೇರಿ ಸ್ಟೀಫನ್ ಶ್ರೀನಿವಾಸ್ ಅವರ ಮೇಲೆ ಟೈರ್ ಹಾಗೂ ಬೈಕ್ ಕೇಬಲ್ ವೈರ್‌ಗಳಿಂದ ಹಲ್ಲೆ ನಡೆಸಿದ್ದರು.
ತೀವ್ರ ಹಲ್ಲೆಯಿಂದ ಸ್ಟೀಫನ್ ಮೃತಪಟ್ಟಿದ್ದರು. ಈ ಸಂಬಂಧ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.
ಅಂದಿನ ಪೊಲೀಸ್ ಇನ್‌ಸ್ಪೆಕ್ಟರ್ ದೀಪಕ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ನಡೆದ ವಿಚಾರಣೆ ವೇಳೆ ಆರೋಪಿಗಳ ಮೇಲಿನ ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಅಭಯ್ ಧನಪಾಲ್ ಚೌಗಳ ಅವರು ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹1 ಲಕ್ಷ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ವಕೀಲರಾದ ಮಮತಾ ಅವರು ವಾದ ಮಂಡಿಸಿದ್ದರು.
