ಬೆಂಗಳೂರು: ಎಸ್‌ಐಆರ್, ಜನಗಣತಿ ಸೇರಿದಂತೆ ಸರ್ಕಾರದ ಇತರ ಕಾರ್ಯಗಳಿಗೆ ಸರ್ಕಾರಿ ಶಾಲಾ ಶಿಕ್ಷಕರನ್ನು ಬಳಸಿಕೊಳ್ಳುವ ಕಾರಣ, ಶಿಕ್ಷಣದ ಗುಣಮಟ್ಟ, ಮಕ್ಕಳ ಕಲಿಕೆ ಮೇಲೆ ಪರಿಣಾಮ ಭೀರುತ್ತದೆ ಎಂಬ ಆರೋಪ ಮೊದಲಿಂದಲೂ ಇತ್ತು. ಇದೀಗ ಸಚಿವರ ಮಧು ಬಂಗಾರಪ್ಪ ಅವರು ಈ ಪದ್ಧತೆಗೆ ಬ್ರೇಕ್ ಹಾಕಲು ಮುಂದಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ ವತಿಯಿಂದ 2026-27ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ ಸುಧಾರಣೆಗಾಗಿ ವಿಷಯವಾರು ಬೆಂಗಳೂರಿನ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಬೆಂಗಳೂರು ಉತ್ತರ ವಲಯದ ಸಂಪನ್ಮೂಲ ಶಿಕ್ಷಕರ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪರೀಕ್ಷಾ ಸಮಯದಲ್ಲಿ ಹೈಸ್ಕೂಲ್ ಶಿಕ್ಷಕರನ್ನು ಯಾವುದೇ ಕಾರಣಕ್ಕೂ ಜನಗಣತಿ ಇತ್ಯಾದಿ ಬಾಹ್ಯ ಕಾರ್ಯಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಈ ವಿಚಾರವಾಗಿ ಸಚಿವ ಸಂಪುಟದಲ್ಲಿ ಚರ್ಚೆ ನಡೆಸುತ್ತೇನೆ ಭರವಸೆ ನೀಡಿದರು.
ಒಂದು ವೇಳೆ ಅಂತಹ ಪರಿಸ್ಥಿತಿ ಎದುರಾದರೆ ಎಂತಹ ಹೋರಾಟಕ್ಕಾದರೂ ನಾನು ಸಿದ್ಧ. ನಿಮ್ಮೊಂದಿಗೆ ನಾನಿದ್ದೇನೆ, ನಾವೆಲ್ಲರೂ ಸೇರಿ ಹೋರಾಟ ಮಾಡೋಣ ಎಂದು ಹೇಳಿದರು.
ಮಕ್ಕಳ ವಾರ್ಷಿಕ ಪರೀಕ್ಷಾ ಸಮಯ ಹತ್ತಿರವಾಗುತ್ತಿದೆ. ಶಾಲೆ, ಕಾಲೇಜುಗಳಲ್ಲಿ ಪೂರ್ವಭಾವಿ ಪರೀಕ್ಷೆಗಳನ್ನು ನಡೆಸಿ ವಿದ್ಯಾರ್ಥಿಗಳನ್ನು ಅಂತಿಮ ಪರೀಕ್ಷೆಗೆ ಸಜ್ಜುಗೊಳಿಸಬೇಕಿದೆ. ಇದೆಲ್ಲ ಜವಾಬ್ದಾರಿಯು ಶಿಕ್ಷಕರ ಮೇಲಿದೆ.
ಈ ಸಂದರ್ಭದಲ್ಲಿ ಶಿಕ್ಷಕರನ್ನು ಇತರ ಕಾರ್ಯಗಳಿಗೆ ನಿಯೋಜಿಸುವುದು ಸರಿಯಲ್ಲ. ಮಕ್ಕಳ ಭವಿಷ್ಯವೇ ನಮಗೆ ಮುಖ್ಯ. ಶಿಕ್ಷಕರು ಯಾವುದೇ ಒತ್ತಡವಿಲ್ಲದೆ ಬೋಧನಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತಾಗಬೇಕು ಎಂದು ಹೇಳಿದರು.
