ಶಿವಮೊಗ್ಗ: ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ಸ್ಥಾಪಿಸಲಾದ ಶಿವಮೊಗ್ಗದ ಕಿಯೋನಿಕ್ಸ್ ಐಟಿ ಪಾರ್ಕ್ ಇಂದು ನಿರ್ವಹಣೆ ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ದುಸ್ಥಿತಿಗೆ ತಲುಪಿದೆ.
ಸರ್ಕಾರದ ನಿರ್ಲಕ್ಷ್ಯದಿಂದ ಹಲವು ಕಂಪನಿಗಳು ಪಾರ್ಕ್ನಿಂದ ನಿರ್ಗಮಿಸಿದ್ದು, ಉಳಿದ ಕಂಪನಿಗಳ ಗುತ್ತಿಗೆ ನವೀಕರಣಕ್ಕೂ ತೊಂದರೆಯಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಆರೋಪಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಸೀಮಿತವಾಗಿದ್ದ ಐಟಿ ಕ್ಷೇತ್ರವನ್ನು ರಾಜ್ಯದ ಇತರ ನಗರಗಳಿಗೂ ವಿಸ್ತರಿಸುವ ಉದ್ದೇಶದಿಂದ 2008ರಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ‘ಬಿಯಾಂಡ್ ಬೆಂಗಳೂರು’ ಪರಿಕಲ್ಪನೆಯಡಿ ಶಿವಮೊಗ್ಗದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಕ್ರಮ ಕೈಗೊಂಡಿದ್ದರು.
ಸುಮಾರು 13 ಕೋಟಿ ರೂ. ವೆಚ್ಚದಲ್ಲಿ 70 ಸಾವಿರ ಚದರ ಅಡಿ ವಿಸ್ತೀರ್ಣದ ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಿಸಲಾಗಿತ್ತು. ಆರಂಭದಲ್ಲಿ ಹಲವು ಕಂಪನಿಗಳು ಕಾರ್ಯಾರಂಭ ಮಾಡಿದ್ದರಿಂದ ಕಿಯೋನಿಕ್ಸ್ಗೆ ಮಾಸಿಕ ಸುಮಾರು 15 ಲಕ್ಷ ರೂ. ಬಾಡಿಗೆ ಆದಾಯ ಬರುತ್ತಿತ್ತು ಎಂದು ತಿಳಿಸಿದರು.
ಆದರೆ, ಪ್ರಸ್ತುತ ಕಟ್ಟಡದ ನಿರ್ವಹಣೆ ಸಂಪೂರ್ಣ ಹದಗೆಟ್ಟಿದೆ. ನಾಲ್ಕು ಮಹಡಿಗಳಲ್ಲಿಯೂ ಹವಾನಿಯಂತ್ರಣ ವ್ಯವಸ್ಥೆ ಇಲ್ಲ. ಮಳೆ ಬಂದಾಗ ಕಟ್ಟಡದೊಳಗೆ ನೀರು ನುಗ್ಗುತ್ತಿದ್ದು, ಪಿಒಪಿ ಮೇಲ್ಛಾವಣಿ ಕುಸಿದಿದೆ. ಗಾಳಿಯ ಸಂಚಾರವೂ ಸಮರ್ಪಕವಾಗಿಲ್ಲ.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಕಟ್ಟಡದ ಕೆಲವು ಭಾಗಗಳಲ್ಲಿ ಪಾರಿವಾಳಗಳು ಗೂಡು ಕಟ್ಟಿರುವುದರಿಂದ ಸ್ವಚ್ಛತೆಯ ಸಮಸ್ಯೆಯೂ ಎದುರಾಗಿದೆ ಎಂದು ದೂರಿದರು.
ಕಂಪನಿಗಳ ಗುತ್ತಿಗೆ ನವೀಕರಣಕ್ಕೆ ಅಗತ್ಯವಿರುವ ಕಟ್ಟಡದ ಸ್ವಾಧೀನ ಪ್ರಮಾಣಪತ್ರ, ಅಗ್ನಿಶಾಮಕ ಇಲಾಖೆಯ ನಿರಾಕ್ಷೇಪಣಾ ಪತ್ರ ಹಾಗೂ ರಚನಾತ್ಮಕ ಸದೃಢತಾ ಪ್ರಮಾಣಪತ್ರಗಳು ಲಭ್ಯವಿಲ್ಲ.
ಶಿವಮೊಗ್ಗ ಮತ್ತು ಬೆಂಗಳೂರಿನ ಕಿಯೋನಿಕ್ಸ್ ಕಚೇರಿಗಳಲ್ಲಿಯೂ ದಾಖಲೆಗಳು ಇಲ್ಲದಿರುವುದು ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ. ಘಟಕದಲ್ಲಿ ಕಾಯಂ ಸಿಬ್ಬಂದಿಯೂ ಇಲ್ಲ ಎಂದು ಆರೋಪಿಸಿದರು.
ಐಟಿ ಪಾರ್ಕ್ನಲ್ಲಿ ಟಿಸಿಎಸ್ ಸೇರಿದಂತೆ ವಿವಿಧ ಕಂಪನಿಗಳ ನೇಮಕಾತಿ ಪರೀಕ್ಷೆಗಳು ನಡೆಯುತ್ತಿದ್ದು, ಪ್ರತಿ ವಾರ ಸಾವಿರಾರು ಅಭ್ಯರ್ಥಿಗಳು ಆಗಮಿಸುತ್ತಾರೆ. ಆದರೆ, ಶೌಚಾಲಯ, ಕ್ಯಾಂಟೀನ್, ವೈ-ಫೈ ಹಾಗೂ ಜಾಮರ್ ವ್ಯವಸ್ಥೆಗಳು ಸಮರ್ಪಕವಾಗಿಲ್ಲ. ಕಟ್ಟಡದ ಗಾಜುಗಳು ಒಡೆದಿದ್ದು, ವಿದ್ಯುತ್ ಉಪಕರಣಗಳಿರುವ ಪ್ರದೇಶದಲ್ಲಿಯೂ ಮಳೆ ನೀರು ನಿಲ್ಲುತ್ತಿದೆ. ಇದರಿಂದ ಉದ್ಯೋಗಿಗಳು ಹಾಗೂ ಪರೀಕ್ಷಾರ್ಥಿಗಳ ಸುರಕ್ಷತೆಗೆ ಅಪಾಯ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಐಟಿ ಪಾರ್ಕ್ಗೆ ಹೊಂದಿಕೊಂಡಂತೆ ಇನ್ನೂ ಎರಡೂವರೆ ಎಕರೆ ಜಾಗವಿದ್ದು, ಅಲ್ಲಿ ಮತ್ತೊಂದು ಕಟ್ಟಡ ನಿರ್ಮಿಸುವ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಬಹುದು. ಹೊಸ ಐಟಿ ಪಾರ್ಕ್ ನಿರ್ಮಿಸುವ ಬದಲು ಈಗಿರುವ ಕಟ್ಟಡವನ್ನು ದುರಸ್ತಿಗೊಳಿಸಿ ಅಗತ್ಯ ಮೂಲಸೌಕರ್ಯ ಒದಗಿಸಬೇಕು. ಬೆಂಗಳೂರಿನ ಐಟಿ ಕಂಪನಿಗಳನ್ನು ಶಿವಮೊಗ್ಗದತ್ತ ಆಕರ್ಷಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಐಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಹರಿಸಬೇಕು. ಅಭಿವೃದ್ಧಿಗೆ ಆದ್ಯತೆ ನೀಡಲು ಸಾಧ್ಯವಾಗದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಅಥವಾ ಜವಾಬ್ದಾರಿಯನ್ನು ಬೇರೆಯವರಿಗೆ ವಹಿಸಬೇಕು ಎಂದು ಆಗ್ರಹಿಸಿದರು.
ಕಿಯೋನಿಕ್ಸ್ನ ಮಾಜಿ ನಿರ್ದೇಶಕರಾದ ಪ್ರಶಾಂತ್, ಮಂಜುನಾಥ್ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.
