Trending

5 ವರ್ಷವೂ ಡಿಸೆಂಬರ್ ಇರುತ್ತೆ,‌ ಇದೇ ಡಿಸೆಂಬರ್ ಅಂತ ನಾನು ಹೇಳಿಲ್ಲ: ಶಾಸಕ ಶಿವಗಂಗಾ ಬಸವರಾಜ್

Spread the love

ದಾವಣಗೆರೆ: “ಐದು ವರ್ಷವೂ ಡಿಸೆಂಬರ್ ಇರುತ್ತೆ. ಯಾವಾಗ ಬೇಕಾದ್ರೂ ಸಿಎಂ ಬದಲಾವಣೆ ಆಗಬಹುದು. ಇದೇ ಡಿಸೆಂಬರ್ ಅಂತ ನಾನು ಹೇಳಿಲ್ಲ” ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಹೇಳಿದ್ದಾರೆ.

ಈ ಹಿಂದೆ ತಮ್ಮ ದಾವಣಗೆರೆ ನಿವಾಸದಲ್ಲಿ ಮಾತನಾಡುತ್ತಾ, ಡಿಸೆಂಬರ್​ನಲ್ಲಿ ಡಿಕೆಶಿ ಸಿಎಂ ಆಗುತ್ತಾರೆ. ಇದನ್ನು ನಾನು ರಕ್ತದಲ್ಲಿ ಬರೆದು ಕೊಡುತ್ತೇನೆ ಎಂದಿದ್ದ ವಿಚಾರವಾಗಿ ಇಂದು ಸ್ಪಷ್ಟನೆ ನೀಡಿದ ಅವರು, ‌”ನಾನು ಡಿಸೆಂಬರ್​ನಲ್ಲಿ ಸಿಎಂ ಬದಲಾಗುತ್ತಾರೆ ಎಂದು ಹೇಳಿದ್ದೆ. ಅಲ್ಲಿವರೆಗೆ ಈ ವಿಷಯವನ್ನು ಮಾತನಾಡಲ್ಲ. ಡಿಸೆಂಬರ್​ವರೆಗೂ ಕಾದು ನೋಡಿ” ಎಂದರು.‌

“ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರನ್ನು ನಾನು ಭೇಟಿಯಾಗಿಲ್ಲ. ಪ್ರವಾಸ ಪೂರ್ವ ಭೇಟಿ ನಿಯೋಜನೆಯಾಗಿದ್ದರಿಂದ ಭೇಟಿಯಾಗಲಿಲ್ಲ. ಕಾಂಗ್ರೆಸ್ ಶಾಸಕರಿಗೆ ಈಗ 50 ಕೋಟಿ ರೂ ಅನುದಾನ ನೀಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಪಕ್ಷದ ಶಾಸಕರಿಗೂ ನೀಡುತ್ತಾರೆ. ಸಾಮಾನ್ಯವಾಗಿ ರೂಲಿಂಗ್ ಪಾರ್ಟಿಯ ಶಾಸಕರಿಗೆ ಅನುದಾನ ಕೊಡುತ್ತಾರೆ ಅಷ್ಟೇ” ಎಂದು ಹೇಳಿದರು.‌

ಇನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮೈಸೂರಲ್ಲಿ ಜರುಗಿದ ಸಾಧನ ಸಮಾವೇಶದಲ್ಲಿ ಅಪಮಾನ ಆಗಿಲ್ಲ. ಕೆಲಸದ ಒತ್ತಡದಿಂದ ಸಿಎಂ ಅವರನ್ನು ಕೇಳಿಯೇ ವೇದಿಕೆಯಿಂದ ಕೆಳಗಿಳಿದಿದ್ದಾರೆ. ಕೆಪಿಸಿಸಿ ಅಧ್ಯಕ್ಷರು ಯಾರಾದರೂ ಆಗಲಿ, ಸ್ವಾಗತ ಮಾಡುತ್ತೇವೆ. ಯಾರು ಸಿಎಂ ಆದರೂ ಕಾಂಗ್ರೆಸ್​ನವರೇ ತಾನೇ ಆಗುತ್ತಾರೆ.

ನಮ್ಮ ಪಕ್ಷದಲ್ಲಿ ಕೊಟ್ಟಷ್ಟು ವಾಕ್ ಸ್ವಾತಂತ್ರ್ಯ ಯಾವ ಪಕ್ಷದಲ್ಲೂ ಕೊಡೋದಿಲ್ಲ. ಬಿಜೆಪಿಯಲ್ಲಿ ಮಾತನಾಡಿದ್ದಕ್ಕೆ ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದ್ರು. ರೇಣುಕಾಚಾರ್ಯಗೆ ನೋಟಿಸ್ ನೀಡಿದ್ರು. ಆದರೆ ನಮ್ಮ ಪಕ್ಷದಲ್ಲಿ ಹಾಗಿಲ್ಲ, ವಾಕ್ ಸ್ವಾತಂತ್ರ್ಯ ನೀಡಿದ್ದಾರೆ. ಇನ್ನು ರಾಷ್ಟ್ರಮಟ್ಟದ ರಾಜಕಾರಣ ನಾನು ಯಾವತ್ತು ಮಾತಾಡೋದಿಲ್ಲ” ಎಂದು ತಿಳಿಸಿದರು.

“ರೇಣುಕಾಚಾರ್ಯ ಹಾಗೂ ನನ್ನ ನಡುವೆ ವಾಕ್ಸಮರ ಅಂತ್ಯವಾಗಿದೆ. ನಾನು ಹೇಳಿರುವುದರಲ್ಲಿ ಸತ್ಯ ಇರಬಹುದು, ಸುಳ್ಳೂ ಇರಬಹುದು. ಅದನ್ನು ಪರಿಶೀಲನೆ ಮಾಡಿ ಸತ್ಯಾಸತ್ಯತೆ ಹೊರ ತರಬೇಕಿದೆ. ಈಗ ಅದೆಲ್ಲವೂ ಮುಗಿದುಹೋದ ವಿಚಾರ. ನಾನು ಏನೂ ಮಾತನಾಡುತ್ತಿಲ್ಲ. ಅವರೂ ಏನೂ ಮಾತನಾಡುತ್ತಿಲ್ಲ” ಎಂದರು.

[pj-news-ticker]