ರಾಯಚೂರು : ಜಿಲ್ಲೆಯ ಮಸ್ಕಿ ತಾಲೂಕಿನ ಅಮೀನಗಡ ಗ್ರಾಮದಲ್ಲಿ ನಕಲಿ ವೈದ್ಯನೊಬ್ಬ ನೀಡಿದ ಚುಚ್ಚುಮದ್ದಿನ ಅಡ್ಡ ಪರಿಣಾಮದಿಂದ 9ನೇ ತರಗತಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಮೃತ ಬಾಲಕಿಯನ್ನು ಸಿಂಧು (15), ಗ್ರಾಮದ ಹುಲಿಗೆಪ್ಪ ಅವರ ಪುತ್ರಿ ಎಂದು ಗುರುತಿಸಲಾಗಿದೆ. ಆರೋಗ್ಯದಲ್ಲಿ ಏರುಪೇರಾಗಿದ್ದ ಹಿನ್ನೆಲೆಯಲ್ಲಿ ಆಕೆಯನ್ನು ಅಜ್ಜಿ ಗ್ರಾಮದಲ್ಲಿ ವೈದ್ಯನೆಂದು ಹೇಳಿಕೊಂಡು ಚಿಕಿತ್ಸೆ ನೀಡುತ್ತಿದ್ದ ವ್ಯಕ್ತಿಯ ಬಳಿಗೆ ಕರೆದೊಯ್ದಿದ್ದಾಳೆ.
ಬಾಲಕಿಯ ಆರೋಗ್ಯ ಪರಿಶೀಲಿಸಿದ ಬಳಿಕ ಆ ವ್ಯಕ್ತಿ ಇಂಜೆಕ್ಷನ್ ನೀಡಿದ್ದಾನೆ. ಆದರೆ, ಈ ಚುಚ್ಚುಮದ್ದಿನ ಬಳಿಕ ಬಾಲಕಿಯ ದೇಹದಲ್ಲಿ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಬಾಲಕಿಯ ಸ್ಥಿತಿ ಗಂಭೀರವಾಗುತ್ತಿದ್ದಂತೆ ಮಾನವಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿನ ವೈದ್ಯರು ಆಕೆಯನ್ನು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಸಿಂಧುವಿನ ಪೋಷಕರು ಉದ್ಯೋಗ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಕೆಯನ್ನು ಅಜ್ಜಿಯ ಬಳಿಯೇ ಬಿಟ್ಟಿದ್ದರು. ಬಾಲಕಿಯ ಅಕಾಲಿಕ ಸಾವಿನ ಸುದ್ದಿ ತಿಳಿದು ಗ್ರಾಮಕ್ಕೆ ಆಗಮಿಸಿದ ಪೋಷಕರು ದುಃಖದಲ್ಲಿ ಮುಳುಗಿದ್ದಾರೆ.
ಘಟನೆ ಸಂಬಂಧ ಬಾಲಕಿಯ ತಂದೆ ಕವಿತಾಳ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಆರೋಪಿಯಾಗಿರುವ ನಕಲಿ ವೈದ್ಯ ಪರಾರಿಯಾಗಿದ್ದು, ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
