Trending

ಮತದಾರರ ಪಟ್ಟಿಯಿಂದ ಅಪ್ಪನ ಹೆಸರು ಡಿಲೀಟ್ : ಎರಡೂವರೆ ತಿಂಗಳ ಕಂದಮ್ಮನಿಗೆ ಜನನ ಪ್ರಮಾಣಪತ್ರ ನಿರಾಕರಣೆ

Spread the love

ಕೂಚ್ ಬೆಹಾರ್ (ಪಶ್ಚಿಮ ಬಂಗಾಳ): ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ವೇಳೆ ತಂದೆಯ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿರುವ ಕಾರಣದಿಂದ, ಎರಡೂವರೆ ತಿಂಗಳ ನವಜಾತ ಹೆಣ್ಣು ಮಗುವಿಗೆ ಜನನ ಪ್ರಮಾಣಪತ್ರ ನೀಡಲು ಅಧಿಕಾರಿಗಳು ನಿರಾಕರಿಸಿದ್ದಾರೆ.

ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ಪೋಷಕರು ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲದಿಂದ ಸರ್ಕಾರಿ ಕಚೇರಿಗಳಿಗೆ ಅಲೆಯುತ್ತಿದ್ದು, ರಾಜಕೀಯ ವಿವಾದಕ್ಕೆ ಕಾರಣವಾಗಿದೆ.

ಏನಿದು ವಿವಾದ?

ಕೂಚ್ ಬೆಹಾರ್ ಜಿಲ್ಲೆಯ ಖತಮಾರಿ ಗ್ರಾಮದ ನಿವಾಸಿಗಳಾದ ಅಬ್ದುಲ್ ಹಬೀಬ್ ಮತ್ತು ಅಮೀನಾ ಖಾತೂನ್ ದಂಪತಿಗೆ ಸೆಪ್ಟೆಂಬರ್ 8ರಂದು ದಿನ್ಹಾಟಾ ಉಪವಿಭಾಗೀಯ ಆಸ್ಪತ್ರೆಯಲ್ಲಿ ಹೆಣ್ಣು ಮಗು ಜನಿಸಿತ್ತು. ಮಗುವಿನ ಜನನ ಪ್ರಮಾಣಪತ್ರಕ್ಕಾಗಿ ಆಸ್ಪತ್ರೆ ಮತ್ತು ಗ್ರಾಮ ಪಂಚಾಯಿತಿ ಕಚೇರಿಯನ್ನು ಸಂಪರ್ಕಿಸಿದಾಗ, ಪಂಚಾಯಿತಿ ಪ್ರಧಾನ್ ಅಥವಾ ಸ್ಥಳೀಯ ಶಾಸಕರಿಂದ ವಾಸಸ್ಥಳ ದೃಢೀಕರಣ ತರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಆದರೆ, ನಿವಾಸ ದೃಢೀಕರಣ ಪತ್ರಕ್ಕಾಗಿ ಹಬೀಬ್ ಅವರು ದಿನ್‌ಹಟಾ ಶಾಸಕ ಅಜಯ್ ರಾಯ್ ಅವರ ಕಚೇರಿ ಹಾಗೂ ಸಾಹೇಬ್‌ಗಂಜ್‌ನ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಅವರನ್ನು ಸಂಪರ್ಕಿಸಿದಾಗ, ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹಬೀಬ್ ಹೆಸರು ಡಿಲೀಟ್ ಆಗಿದೆ ಎಂಬ ಕಾರಣ ನೀಡಿ ಪ್ರಮಾಣಪತ್ರ ನೀಡಲು ನಿರಾಕರಿಸಲಾಗಿದೆ.

ಅಲ್ಲದೆ, ಶಾಸಕರ ಕಚೇರಿಯ ಸಿಬ್ಬಂದಿಯೊಬ್ಬರು ಹಬೀಬ್ ಅವರನ್ನು ಬಾಂಗ್ಲಾದೇಶಿ ಪ್ರಜೆ ಎಂದು ಕರೆದು ಮೊದಲು ಎನ್‌ಆರ್‌ಸಿ ಮೂಲಕ ನೋಂದಾಯಿಸಿಕೊಳ್ಳುವಂತೆ ಹೇಳಿದ್ದಾರೆ ಎಂದು ಹಬೀಬ್ ಆರೋಪಿಸಿದ್ದಾರೆ.

ನಾನು ಹುಟ್ಟಿದಾಗಿನಿಂದಲೂ ಭಾರತೀಯನೇ

ಈ ಬಗ್ಗೆ ತನ್ನ ಅಳಲು ತೊಡಿಕೊಂಡಿರುವ ಅಬ್ದುಲ್ ಹಬೀಬ್, “ನಾನು ಹುಟ್ಟಿದಾಗಿನಿಂದ ಭಾರತದಲ್ಲೇ ವಾಸಿಸುತ್ತಿದ್ದೇನೆ. ನನ್ನ ಅಜ್ಜ ಕಟ್ಟಿಸಿದ ಮನೆ ಇಲ್ಲಿದೆ. ನನ್ನ ತಂದೆ-ತಾಯಿ, ಪತ್ನಿ ಹಾಗೂ ಅಕ್ಕನ ಹೆಸರು ಮತದಾರರ ಪಟ್ಟಿಯಲ್ಲಿದೆ.

ನನ್ನ ಮತ್ತು ನನ್ನ ಮೂವರು ಸಹೋದರಿಯರ ಹೆಸರನ್ನು ಮಾತ್ರ ತಾಂತ್ರಿಕ ಕಾರಣ ನೀಡಿ ತೆಗೆದುಹಾಕಲಾಗಿದೆ. ಎಲ್ಲ ದಾಖಲೆಗಳನ್ನು ತೋರಿಸಿದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ” ಎಂದು ಹೇಳಿದ್ದಾರೆ.

ಏತನ್ಮಧ್ಯೆ, ಹಬೀಬ್ ಅವರು ತಮ್ಮ ಹೆಸರನ್ನು ಮತದಾರರ ಪಟ್ಟಿಗೆ ಮರುಸೇರ್ಪಡೆಗೊಳಿಸುವಂತೆ ಮೇಲ್ಮನವಿ ನ್ಯಾಯಮಂಡಳಿಯ ಮೊರೆ ಹೋಗಿದ್ದು, ಅರ್ಜಿ ವಿಚಾರಣೆಗೆ ಬಾಕಿ ಇದೆ.

ಈ ನಡುವೆ, ನಾಗರಿಕ ಹಕ್ಕುಗಳ ರಕ್ಷಣಾ ಸಂಘ (APCR) ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, “ಮಗುವಿನ ಕಾನೂನುಬದ್ಧ ಗುರುತಿನ ಹಕ್ಕನ್ನು ಪೋಷಕರ ಮತದಾರರ ಸ್ಥಾನಮಾನಕ್ಕೆ ಜೋಡಿಸಬಾರದು. ತಕ್ಷಣವೇ ಮಗುವಿಗೆ ಜನನ ಪ್ರಮಾಣಪತ್ರ ನೀಡಬೇಕು” ಎಂದು ಆಗ್ರಹಿಸಿದೆ.

ಮತ್ತೊಂದೆಡೆ, ಈ ಘಟನೆ ರಾಷ್ಟ್ರಮಟ್ಟದಲ್ಲಿ ಸುದ್ದಿಯಾದ ಬಳಿಕ, ಸಾಹೇಬ್‌ಗಂಜ್ ಬ್ಲಾಕ್ ಅಭಿವೃದ್ಧಿ ಅಧಿಕಾರಿ ಲಾಮು ವೈ. ವಾಂಗ್ಡಿ ಅವರು ಪ್ರತಿಕ್ರಿಯಿಸಿದ್ದು, “ಆಡಳಿತವು ಈ ವಿಷಯವನ್ನು ಪರಿಶೀಲಿಸಲಿದೆ” ಎಂದು ತಿಳಿಸಿದ್ದಾರೆ.

[pj-news-ticker]