Trending

ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನು ಒಂದಾಗಿಸಲು ನಾನ್ಯಾರು?: ಶಿವರಾಜ್ ಕುಮಾರ್

Spread the love

ಬೆಂಗಳೂರು: ಮಾಜಿ ಸಿಎಂ ಬಂಗಾರಪ್ಪ ಕುಟುಂಬವನ್ನ ಒಂದಾಗಿಸಲು ನಾನ್ಯಾರು? ನಾನು ಅವರ ಮನೆಯ ಅಳಿಯ ಅಷ್ಟೇ, ಮಗನಲ್ಲ ಎಂದು ನಟ ಶಿವರಾಜಕುಮಾರ್ ಹೇಳಿದ್ದಾರೆ.

ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರ ಪತ್ನಿ, ನಿರ್ಮಾಪಕಿ ಗೀತಾ ಶಿವರಾಜ್‌ಕುಮಾರ್ ಅವರಿಗೆ ಈ ಬಾರಿ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿದೆ. ಕಾಂಗ್ರೆಸ್ ಪಕ್ಷವು ಗೀತಾ ಶಿವರಾಜ್‌ಕುಮಾರ್ ಅವರನ್ನು ತಮ್ಮ ಪಕ್ಷದಿಂದ ಕಣಕ್ಕಿಳಿಸಲು ನಿರ್ಧಾರ ಮಾಡಿದೆ. 10 ವರ್ಷಗಳ ನಂತರ ಪುನಃ ಚುನಾವಣಾ ಅಖಾಡಕ್ಕೆ ಗೀತಾ ಇಳಿಯುತ್ತಿದ್ದಾರೆ. ಈ ಬಗ್ಗೆ ಪತಿ ಶಿವರಾಜ್‌ಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಪತ್ನಿ ಪರವಾಗಿ ಚುನಾವಣಾ ಪ್ರಚಾರಕ್ಕೂ ತೆರಳುವುದಾಗಿ ಹೇಳಿದ್ದಾರೆ.

ಬಂಗಾರಪ್ಪ ಕುಟುಂಬ ಒಂದಾಗಿಸಲು ಶಿವಕುಮಾರ್ ಮುಂದಾಗುತ್ತಿಲ್ಲ ಯಾಕೆ ಎಂಬ ಪ್ರಶ್ನೆಗೆ‌ ಉತ್ತರಿಸಿದ ಅವರು, ನೋಡಿ ಅವರನ್ನ ಒಂದು ಮಾಡೋಕೆ ನಾನ್ಯಾರು. ಅವರಾಗಿಯೇ ಒಂದಾಗಬೇಕು ಅಷ್ಟೇ ನಾನೇನು ಮಾಡಕ್ಕಾಗಲ್ಲ. ನಾನು ಆ ಮನೆಯ ಅಳಿಯನೇ ಹೊರತು ಅವರ ಮನೆ ಮಗನಲ್ಲ ಎಂದು ಹೇಳಿದ್ದಾರೆ.

ಲೋಕಸಭೆ ಚುನಾವಣೆ ಸಿದ್ಧತೆ ನಡೆಯುತ್ತಿದೆ. ಯಾವಾನಿಗಿಂದ ಚುನಾವಣಾ ಪ್ರಚಾರಕ್ಕೆ ಹೋಗಬೇಕು ಅನ್ನೋದು ತೀರ್ಮಾನ ಆಗಿಲ್ಲ. ಯಾವಾಗ ಹೋಗಬೇಕು ಅವಾಗ ಹೋಗ್ತೀನಿ. ಈ ಬಾರಿ ಪೂರ್ತಿ ಚುನಾವಣೆಯಲ್ಲಿ ತೊಡಗಿಸಿಕೊಳ್ಳುತ್ತೇನೆ. ಸಂಸದರಾಗಬೇಕೆಂದೆ ಚುನಾವಣೆಗೆ ಬಂದಿರೋದು. ಕುಮಾರ್ ಬಂಗಾರಪ್ಪ ಬರ್ತಾರಾ ಚುನಾವಣೆ ಪ್ರಚಾರಕ್ಕೆ, ಅದೆಲ್ಲವೂ ಗೊತ್ತಿಲ್ಲ ‌ಸರ್ ನನಗೆ ಎಂದರು‌.

ಸ್ಟಾರ್ ನಟರು ಚುನಾವಣಾ ಪ್ರಚಾರಕ್ಕೆ ಬರ್ತಾರೆ ಎಂಬ ಪ್ರಶ್ನೆಗೆ ಇನ್ನೂ ನಾವು ಯಾರಿಗೂ ತೊಂದರೆ ಕೊಡುವುದಕ್ಕೆ ಹೋಗಿಲ್ಲ. ಈ ಬಾರಿ ಬಿಸಿಲು ಜಾಸ್ತಿಯಿದೆ. ಅವರು ಪಾಪ ಒತ್ತಡದಿಂದ ಚುನಾವಣಾ ಪ್ರಚಾರಕ್ಕೆ ಬರಬಾರದು. ನಾನು ಕರೆದ್ರೆ ಬರ್ತಾರೆ ಹಾಗಂತ ಅವರನ್ನ ಕರೆಯುವುದಕ್ಕೆ ಹೋಗಬಾರದು. ನಮ್ಮ ನಟರಿಗೆ ಯಾವಾಗಲೂ ಸ್ಪೇಸ್ ಕೊಡಬೇಕು. ಇರೋ ಪ್ರೀತಿ ವಿಶ್ವಾಸ ಹಾಗೇ ಉಳಿಸಿಕೊಳ್ಳಬೇಕು ಎಂದರು.

ಜೀವನದಲ್ಲಿ ಯಾವಾಗಲೂ ಕಾನ್ಫಿಡೆಂಟ್ ಆಗಿ ಇರಬೇಕು. ಇದು ಎಲೆಕ್ಷನ್ ಅಷ್ಟೇ, ಅದನ್ನು ನಾವೆಲ್ಲರೂ ಎದುರಿಸಬೇಕು, ಎದುರಿಸುತ್ತೇವೆ. ಮನುಷ್ಯ ಬದುಕಿರುವುದೇ ಭರವಸೆ, ನಂಬಿಕೆ ಮೇಲೆ. ಎಲ್ಲರೂ ಗೆಲ್ಲುತ್ತೇವೆ ಅಂತಾನೇ ಹೋಗೋದಲ್ವಾ? ರೇಸ್‌ ಹೋಗುವವರು ಗೆಲ್ಲುತ್ತೇನೆ ಅಂತಾನೇ ಹೋಗೋದು. ಸೋಲುತ್ತೇನೆ ಅಂತ ಯಾರೂ ಹೋಗಲ್ಲ. ಅಖಾಡದಲ್ಲಿ ಯಾರು ಬಂದ್ರೆ ಏನು? ಒಂದೇ ಸಲಕ್ಕೆ ಸ್ಟಾರ್ ಆಗೋಕೆ ಆಗಲ್ಲ. ನಿಧಾನಕ್ಕೆ ಹೆಜ್ಜೆ ಇಡಬೇಕು.

[pj-news-ticker]