Breaking
Sat. Apr 20th, 2024

ರಾಜರು ವೈಭೋಗ ಬಿಟ್ಟು ಸಿದ್ದರಾಮಯ್ಯ ವಿರುದ್ಧ ಹೋರಾಟಕ್ಕೆ ಬಂದರೆ ಸ್ವಾಗತ: ಪ್ರತಾಪ್ ಸಿಂಹ

By Mooka Nayaka News Mar 12, 2024
Spread the love

ಮೈಸೂರು: ಯದುವೀರ್ ಅವರಿಗೆ ಟಿಕೆಟ್ ಕೊಡುವುದು ನಿಜವಾದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ. ಅರಮನೆಯ ಎಸಿ ಕೋಣೆಯಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕಲು ಯದುವೀರ್ ಬಂದರೆ ಸ್ವಾಗತಿಸದೆ ಇರಲಾಗುತ್ತಾ? ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಮೈಸೂರು ಲೋಕಸಭೆ ಚುನಾವಣೆಗೆ ಯುವರಾಜ ಯದುವೀರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಅವರು ಈ ಮಾತುಗಳನ್ನಾಡಿದರು.

ಅರಮನೆ ಆಸ್ತಿ ವಿಚಾರದಲ್ಲಿ ಸರಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿಯಾಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ. ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿಯಾದರೆ ಆ ಸಮಸ್ಯೆ ಬಗೆಹರಿಯುತ್ತದೆ. ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ವಿಚಾರದಲ್ಲಿ ಅರಮನೆಯವರು ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ ಎಂದರು.

ಅರಮನೆಯೊಳಗೆ ಅರಾಮವಾಗಿ ಇದ್ದಂತಹ ವ್ಯಕ್ತಿ ಸಿದ್ದರಾಮಯ್ಯ ವಿರುದ್ದ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ. ಅರಮನೆ ವೈಭೋಗ ಬೇಕಾಗಿಲ್ಲ, ಜನರ ಜೊತೆ ಹೋರಾಟಕ್ಕೆ ಬರುತ್ತೇನೆಂದು ಹೊರಟಿದ್ದಾರೆ. ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷವಲ್ಲವೇ? ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ವ್ಯಂಗ್ಯವಾಗಿಯೇ ನುಡಿದರು.

ಅವರು ರಾಜಕಾರಣಕ್ಕೆ ಬಂದರೆ ಜನರಿಗೆ ಹಲವಾರು ರೀತಿಯ ಅನುಕೂಲ ಆಗಲಿದೆ. ಮಹಾರಾಜರು ಜನ ಸಾಮಾನ್ಯರಿಗೆ, ಪಕ್ಷದ ನಾಯಕರಿಗೆ ಕೈ ಮುಗಿಯಬೇಕು. ಪಕ್ಷದ ಸಿದ್ದಾಂತದಂತೆ ನಾಯಕರು ವೇದಿಕೆಯ ಮೇಲೆ ಆಸೀ‌ನರಾದರೆ ಜನಸಾಮಾನ್ಯರ ಸಾಲಿನಲ್ಲಿ ಕೂರಬೇಕು ಎಂದು ಯದುವೀರ್ ಕಾಲೆಳೆದರು.

25 ಸಂಸದರಲ್ಲಿ ನನ್ನಷ್ಟು ಹಿಂದೂತ್ವದ ಕಮಿಟ್ ಮೆಂಟ್ ಇರುವ ಬೇರೆ ಯಾರಿದ್ದಾರೆ? ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರಿಗೂ ಸರಿಗಟ್ಟಲು ಆಗದು. ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ? ಮೈಸೂರು – ಕೊಡಗು ಅಭಿವೃದ್ಧಿಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ? ನನಗೆ ಪಕ್ಷ ನಿಷ್ಠೆ ನನಗಿದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ದ.  ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೆ ದುಡಿಯುತ್ತೇನೆ ಎಂದರು.

Related Post