Spread the love

ಬೆಂಗಳೂರು: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಿಜೆಪಿಯ ಬಾಬುರಾವ್ ಚಿಂಚನಸೂರ್  ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದಾರೆ. ಅವರ ರಾಜೀನಾಮೆಯನ್ನು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಂಗೀಕರಿಸಿದ್ದಾರೆ.

ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ ಕ್ಷೇತ್ರದ ವಿಧಾನಸಭೆ ಟಿಕೆಟ್ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ತಿಳಿಸಿದ್ದರು. ಹೀಗಾಗಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ಅವರು ರಾಜೀನಾಮೆ ನೀಡಿದ್ದಾರೆ. ಜತೆಗೆ, ಬಿಜೆಪಿ ಪಕ್ಷಕ್ಕೂ ರಾಜೀನಾಮೆ ನೀಡಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ನಿಜ ಶರಣ ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷರೂ ಆಗಿರುವ ಚಿಂಚನಸೂರ್, 2019 ರ ಲೋಕಸಭ ಚುನಾವಣೆ ವೇಳೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ಪಡೆ ಆಗಿದ್ದರು. ಇದೀಗ ನಾಲ್ಕು ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.

2019ರ ಲೋಕಸಭಾ ಚುನಾವಣೆಯಲ್ಲಿ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸುವಲ್ಲಿ ಚಿಂಚನಸೂರ್ ಪ್ರಮುಖ ಪಾತ್ರ ವಹಿಸಿದ್ದರು. ಅವರು ತಿಂಗಳ ಹಿಂದೆಯೇ ಬಿಜೆಪಿಗೆ ರಾಜೀನಾಮೆ ಕೊಡಲು‌ ಮುಂದಾಗಿದ್ದರು. ಆದರೆ, ಬಿಜೆಪಿ ನಾಯಕರ ಒತ್ತಡಕ್ಕೆ ಮಣಿದು ಬಿಜೆಪಿಯಲ್ಲೇ ಉಳಿಯುವುದಾಗಿ ಹೇಳಿದ್ದರು.

Leave a Reply

Your email address will not be published. Required fields are marked *