ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಗೆ ಭಾರೀ ತಯಾರಿ ನಡೆಸಿರುವ ಬಿಜೆಪಿ ಇಂದು ತನ್ನ ಪಕ್ಷದ 195 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ದಿನಾಂಕಗಳನ್ನು ಭಾರತೀಯ ಚುನಾವಣಾ ಆಯೋಗವು (ಇಸಿಐ) ಘೋಷಿಸುವ ದಿನಗಳ ಮೊದಲು ಈ ಪಟ್ಟಿ ಬಿಡುಗಡೆ ಮಾಡಲಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ 370+ ಸ್ಥಾನಗಳನ್ನು ಮತ್ತು NDA 400+ ಸ್ಥಾನಗಳನ್ನು ಗೆಲ್ಲುವ ಗುರಿ ಹೊಂದಿದೆ. ಮೊದಲ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಕ್ಷೇತ್ರದ ಅಭ್ಯರ್ಥಿಯ ಪಟ್ಟಿ ಪ್ರಕಟ ಮಾಡಿಲ್ಲ.
ವಾರಣಾಸಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದಾರೆ. ಇನ್ನು ಗಾಂಧಿನಗರದಿಂದ ಅಮಿತ್ ಶಾ, ಲಖನೌದಿಂದ ರಾಜನಾಥ ಸಿಂಗ್ ಸ್ಪರ್ಧಿಸುತ್ತಿದ್ದಾರೆ. ಅಮೇಥಿಯಿಂದ ಸ್ಮೃತಿ ಇರಾನಿ, ಕೋಟಾದಿಂದ ಓಂ ಬಿರ್ಲಾ ಹಾಗೂ ಈ ಬಾರಿ ಮಾಜಿ ಸಚಿವೆ ದಿವಂಗತ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಗೆ ಟಿಕೆಟ್ ನೀಡಲಾಗಿದ್ದು ನ್ಯೂಡೆಲ್ಲಿಯಿಂದ ಸ್ಪರ್ಧಿಸುತ್ತಿದ್ದಾರೆ.
ಉತ್ತರ ಪ್ರದೇಶ 51, ಪಶ್ಚಿಮ ಬಂಗಾಳ 20, ಮಧ್ಯಪ್ರದೇಶ 24, ಗುಜರಾತ್ ಮತ್ತು ರಾಜಸ್ಥಾನದಿಂದ ತಲಾ 15, ಕೇರಳದ 12, ತೆಲಂಗಾಣದ 9, ಅಸ್ಸಾಂನ 11, ಜಾರ್ಖಂಡ್ ಮತ್ತು ಛತ್ತೀಸ್‌ಗಢದಿಂದ ತಲಾ 11 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ದೆಹಲಿಯ 5, ಜಮ್ಮು ಮತ್ತು ಕಾಶ್ಮೀರದಿಂದ 2, ಉತ್ತರಾಖಂಡದಿಂದ 3, ಅರುಣಾಚಲ ಪ್ರದೇಶದಿಂದ 2 ಮತ್ತು ಗೋವಾ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್ ಮತ್ತು ದಮನ್ ಮತ್ತು ದಿಯುನಿಂದ ತಲಾ 1 ಕ್ಷೇತ್ರದ ಅಭ್ಯರ್ಥಿಗಳ ಹೆಸರನ್ನು ಘೋಷಿಸಲಾಗಿದೆ.
ಮೊದಲ ಪಟ್ಟಿಯಲ್ಲಿ 28 ಮಹಿಳಾ ಅಭ್ಯರ್ಥಿಗಳು, 47 ಯುವಕರು, ಪರಿಶಿಷ್ಟ ಜಾತಿಯಿಂದ 27, ಪರಿಶಿಷ್ಟ ಪಂಗಡದಿಂದ 18 ಮತ್ತು 57 ಒಬಿಸಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ.