ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿದ ‘ವೀಕೆಂಡ್ ವಿತ್ ರಮೇಶ್‘ ಹೊಸ ಸೀಸನ್ ಪ್ರಾರಂಭವಾಗಲಿದೆ. ಶೋನ ಪ್ರೋಮೋಗಳು ಈಗಾಗಲೇ ಬಿಡುಗಡೆ ಆಗಿದ್ದು, ಮೊದಲ ಸಂಚಿಕೆ ಮಾರ್ಚ್ 25 ರಂದು ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಐದನೇ ಸೀಸನ್ ಇದಾಗಿರಲಿದ್ದು ಸೀಸನ್ ಪ್ರಾರಂಭಕ್ಕೂ ಮುನ್ನ ನಿರೂಪಕ ರಮೇಶ್ ಅರವಿಂದ್ ಹಾಗೂ ಜೀ ವಾಹಿನಿಯ ಚೀಫ್ ಕಂಟೆಂಟ್ ಆಫೀಸರ್ ರಾಘವೇಂದ್ರ ಹುಣಸೂರು ಅವರು ಪತ್ರಿಕಾಗೋಷ್ಠಿಯಲ್ಲಿ ಶೋ ಕುರಿತಾಗಿ ಮಾಹಿತಿ ನೀಡಿದ್ದು, ಮೊದಲ ಎಪಿಸೋಡ್ನ ಅತಿಥಿ ಯಾರಾಗಲಿದ್ದಾರೆ ಎಂಬುದರ ಜೊತೆಗೆ ಈ ಸೀಸನ್ನಲ್ಲಿ ಕಾಣಿಸಿಕೊಳ್ಳುವ ಇತರೆ ಕೆಲವು ಅತಿಥಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ.
ಇಷ್ಟು ದಿನ ಹರಿದಾಡಿದ್ದ ಸುದ್ದಿಯ ಪ್ರಕಾರ ಮೊದಲ ಎಪಿಸೋಡ್ನಲ್ಲಿ ರಿಷಬ್ ಶೆಟ್ಟಿ ಅತಿಥಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿತ್ತು. ಆದರೆ ಅದು ಸುಳ್ಳಾಗಿದ್ದು ಮೊದಲ ಎಪಿಸೋಡ್ಗೆ ಸ್ಯಾಂಡಲ್ವುಡ್ ಕ್ವೀನ್ ನಟಿ ರಮ್ಯಾ ಅತಿಥಿಯಾಗಿ ಭಾಗಿಯಾಗಲಿದ್ದಾರೆ. ರಮ್ಯಾ ಜೊತೆಗಿನ ಎಪಿಸೋಡ್ನ ಚಿತ್ರೀಕರಣ ಮಾರ್ಚ್ 21 ರಿಂದ ಪ್ರಾರಂಭವಾಗಲಿದೆ. ಎರಡನೇ ಎಪಿಸೋಡ್ ನಲ್ಲಿ ಡ್ಯಾನ್ಸ್ ಲಿಜೆಂಡ್ ಪ್ರಭುದೇವ ಸಾಧಕರ ಕುರ್ಚಿಯ ಮೇಲೆ ಕೂರಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಈ ಸೀಸನ್ನಲ್ಲಿ ನಟ ಧ್ರುವ ಸರ್ಜಾ, ನಟಿ ರಚಿತಾ ರಾಮ್, ನಟಿ ಮಾಲಾಶ್ರೀ, ಇಶಾ ಫೌಂಡೇಶನ್ನ ಜಗ್ಗಿ ವಾಸುದೇವ್ , ಖ್ಯಾತ ಹೃದ್ರೋಗ ತಜ್ಞ ಮಂಜುನಾಥ್ ಸೇರಿದಂತೆ ಇನ್ನೂ ಹಲವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ವಿಶೇಷವೆಂದರೆ ಇನ್ನು 16 ಸಾಧಕರ ಬಳಿಕ ನೂರನೇ ಸಾಧಕರು ಬರಲಿದ್ದು, ಆ ಎಪಿಸೋಡ್ಗೆ ಬಹಳ ವಿಶೇಷ ಅತಿಥಿಯೊಬ್ಬರು ಸಾಧಕರ ಕುರ್ಚಿ ಏರಲಿದ್ದಾರೆ. ನೂರನೇ ಎಪಿಸೋಡ್ಗೆ ಬರುವ ಅತಿಥಿ ಆ ಚೇರ್ಗೆ ನ್ಯಾಯ ಕೊಡಲಿದ್ದಾರೆ ಎಂದಿದ್ದಾರೆ ನಟ ರಮೇಶ್.
ಇದೇ ಮಾರ್ಚ್ 25 ರಿಂದ ಸೀಸನ್ 5 ಪ್ರಸಾರವಾಗಲಿದೆ.