” ಕರಾವಳಿಯ ಕಡಲ ಅಲೆಗಳು ಮಾತನಾಡುತ್ತವೆ” ಎಂಬ ಭಾವದೊಂದಿಗೆ ಅನಾವರಣಗೊಳ್ಳುವ ಮೀನುಗಾರರ ಚರಿತ್ರೆ, “ಮೀನು ಹಿಡಿಯಲು ಕಡಲಿಗೆ ಹೋದ ನನ್ನ ಯಜಮಾನರು ಇದುವರೆಗೆ ಮನೆಗೆ ಬಂದಿಲ್ಲ, ಅವರು ಸತ್ತಿದ್ದಾರೋ ಬದುಕಿದ್ದಾರೋ ಎಂಬುದು ನಮಗೆ ಇನ್ನು ತಿಳಿದಿಲ್ಲ” ಎಂದು ಮಾರ್ಮಿಕ ಹಾಗೂ ಹತಾಶೆಯ ನುಡಿ ಮೀನುಗಾರನ ಹೆಂಡತಿ ಹೇಳುವಾಗ, ಕರಾವಳಿಯ ರಾಜಕಾರಣ ಅಮಾಯಕ ಮೀನುಗಾರರನ್ನು ಹೇಗೆ ಬಲಿ ಪಡೆಯುತ್ತಿದೆ, ಹಬ್ಬ ಹರಿದಿನಗಳ ಉನ್ಮಾದದಲ್ಲಿ ಯುವಕರು ಹಾದಿ ತಪ್ಪಿದ ತಬ್ಬಲಿಗಳಾಗಿ ಅಪರಾಧದ ಜಗತ್ತಿನೊಳಗೆ ಪ್ರವೇಶ ಪಡೆದು, ಹೊರಬರಲಾರದೆ ಒದ್ದಾಡುವ ಘಟನೆಗಳನ್ನು ತುಂಬಾ ವಾಸ್ತವಿಕವಾಗಿ ಈ ಚಲನಚಿತ್ರದಲ್ಲಿ ಚಿತ್ರಿಸಲಾಗಿದೆ.
ಮಾರಾಟವಾದ ಮೀನಿನ ಹೊಟ್ಟೆಯಲ್ಲಿ ಮಾದಕ ವಸ್ತು ಪತ್ತೆಯಾಗಿ, ಪೊಲೀಸರು ಅಮಾಯಕ ಮೀನುಗಾರರನ್ನು ಹಿಂಸಿಸುವುದು, ಮೀನುಗಾರ ಹುಡುಗರನ್ನು ರಾಜಕಾರಣಿಗಳು ಪೊಲೀಸರ ವಿರುದ್ಧ ಎತ್ತಿಕಟ್ಟುವುದು, ಪ್ರಚಾರದ ಗೀಳಿಗೆ ಒಳಗಾಗುವ ಹಿರಿಯ ಪೊಲೀಸ್ ಅಧಿಕಾರಿಗಳು ಕೆಳಹಂತದ ಅಧಿಕಾರಿಗಳನ್ನು ಇಕ್ಕಟ್ಟಿಗೆ ಸಿಲುಕಿಸುವುದು, ಮಾದಕ ವಸ್ತುಗಳ ಜಾಲ ಭೇದಿಸುವ ಒಂದೊಂದು ಘಟನೆಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡುತ್ತದೆ, ಇನ್ನೇನು ಚಿತ್ರಕಥೆ ಮುಗಿಯಿತು ಎನ್ನುವಷ್ಟರಲ್ಲಿ ಮತ್ತೊಂದು ಕಥೆ ಹುಟ್ಟಿಕೊಂಡು ಮತ್ತಷ್ಟು ಕುತೂಹಲಕ್ಕೆ ಎಡೆ ಮಾಡಿಕೊಡುವುದು, ಹೀಗೆ ಮೀನುಗಾರರು, ಪೊಲೀಸರು ಹಾಗೂ ರಾಜಕಾರಣದ ಮಧ್ಯೆ ಹೆಣೆಯಲಾಗಿರುವ ಈ ಚಿತ್ರಕಥೆ ಕ್ಲೈಮ್ಯಾಕ್ಸ್ ತುಂಬಾ ಕೌತುಕತೆಯಿಂದ ಕೂಡಿದೆ. ಇದನ್ನು ನೋಡಲು ಚಿತ್ರಮಂದಿರಕ್ಕೆ ಹೋಗಲೇಬೇಕು.
ಖಡಕ್ ಪೊಲೀಸ್ ಅಧಿಕಾರಿಯಾಗಿ ಪೃಥ್ವಿ ಅಂಬರ್ ಕಾಣಿಸಿಕೊಂಡಿದ್ದಾರೆ, ಹಲವಾರು ಚಲನಚಿತ್ರಗಳಲ್ಲಿ ಹಾಸ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ಪ್ರಶಾಂತ್ ಸಿದ್ಧಿ, ಈ ಚಿತ್ರದಲ್ಲಿ ಮೀನುಗಾರ ಯುವಕನಾಗಿ ಇವರೊಂದಿಗೆ ನಾಗರಾಜ್ ಬೈಂದೂರು ಬೇರೆಯದೆ ಗೆಟಪ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಶರತ್ ಲೋಹಿತಾಶ್ವ ಹಾಗೂ ಭಜರಂಗಿ ಲೋಕಿ ರಫ್ ಅಂಡ್ ಟಫ್ ಫೆಡ್ಲರ್ ಗಳಾಗಿ ಕಾಣಿಸಿಕೊಂಡಿದ್ದಾರೆ.
ಸಹ್ಯಾದ್ರಿ ಪ್ರೊಡಕ್ಷನ್ ನಿರ್ಮಾಣದ ಚೊಚ್ಚಲ ಚಿತ್ರವಾದರೂ ನಿರ್ಮಾಪಕ ಬಿ.ಎಸ್. ವಿಶ್ವನಾಥ್ ಧಾರಾಳವಾಗಿ ಹಣ ಖರ್ಚು ಮಾಡಿದ್ದಾರೆ. ದೇವರಾಜ್ ಪೂಜಾರ್ ಕಥೆ – ಸಂಭಾಷಣೆ ಬರೆದು ನಿರ್ದೇಶನ ಅಚ್ಚುಕಟ್ಟಾಗಿ ಮಾಡಿದ್ದಾರೆ. ಪ್ರವೀಣ್ ಛಾಯಾಗ್ರಹಣ ಚೆನ್ನಾಗಿ ಮೂಡಿ ಬಂದಿದೆ. ಪ್ರಶಾಂತ್ ಸಿದ್ಧಿಯವರ ಸಂಗೀತ ನಿರ್ದೇಶನದ ಮೊದಲ ಚಿತ್ರವಾಗಿದ್ದರೂ ಪ್ರೇಕ್ಷಕರನ್ನು ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಹಿನ್ನಲೆ ಸಂಗೀತ ಸುಕುಮಾರ್ ಮಾಡಿದ್ದಾರೆ.
ಹೇಮಂತ್ ಕುಮಾರ್ ಹಾಗೂ ಇಂದುಮತಿ ನಾಗರಾಜರವರ ಹಿನ್ನೆಲೆ ಗಾಯನವಿದೆ. ಚಿತ್ರದಲ್ಲಿ ಕರಾವಳಿ ತುಳು ಭಾಷೆಯ ಸಂಭಾಷಣೆ ಅಲ್ಲಲ್ಲಿ ಮೂಡಿ ಬಂದಿದೆ. ಸನ್ನಿವೇಶಕ್ಕೆ ತಕ್ಕಂತೆ ಹಾಡುಗಳ ಸಂಯೋಜನೆ ಮಾಡಲಾಗಿದೆ. ಭಾಗೀರಥಿ ಹಾಗೂ ಕುವ- ಕುವಾಲೆ ಹಾಡು ಪ್ರೇಕ್ಷಕರನ್ನ ಗುಣುಗುವಂತೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.