Spread the love

ಬೆಂಗಳೂರು: ರೌಡಿ ಶೀಟರ್ ಫೈಟರ್ ರವಿ ಎದುರು ಕೈ ಮುಗಿದು ನಿಂತ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ರಾಜ್ಯ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

ಈ ಕುರಿತ ಫೋಟೋವೊಂದನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್, ಜಗತ್ತಿನಲ್ಲಿಯೇ ಬಿಜೆಪಿಯಂತಹ ನಿರ್ಲಜ್ಜ ರಾಜಕೀಯ ಪಕ್ಷ ಬೇರೆ ಇರಲು ಸಾಧ್ಯವೇ ಇಲ್ಲ.  ಫೈಟರ್ ರವಿ ಎಂಬ ರೌಡಿ ಶೀಟರ್ ಎದುರು ಕೈಮುಗಿದು ನಿಂತ ನರೇಂದ್ರ ಮೋದಿ ಅವರಿಂದ ಪ್ರಧಾನಿ ಹುದ್ದೆಗೆ ಕಳಂಕ ಅಂಟಿದೆ ಎಂದು ಆರೋಪಿಸಿದೆ. ರೌಡಿಗಳನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದ ಬಿಜೆಪಿ ರೌಡಿಯನ್ನು ಪ್ರಧಾನಿ ಎದುರು ನಿಲ್ಲಿಸಿದ್ದು ನಾಚಿಕೆಗೇಡು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಮತ್ತೊಂದು ಟ್ವೀಟ್ ನಲ್ಲಿ  ರಾತ್ರೋ ರಾತ್ರಿ ಉರಿಗೌಡ, ದೊಡ್ಡ ನಂಜೇಗೌಡ ಮಹಾದ್ವಾರ ತೆರವು ಕುರಿತಂತೆಯೂ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ನಿಮ್ಮನ್ನು ಸ್ವಾಗತಿಸಲು ಧಿಡೀರ್ ಹಾಜರಾಗಿದ್ದ ಉರಿಗೌಡ, ದೊಡ್ಡನಂಜೇಗೌಡ ಎಂಬ ಫಿಕ್ಷನ್ ಕ್ಯಾರೆಕ್ಟರ್‌ಗಳು ರಾತ್ರೋರಾತ್ರಿ ಎಲ್ಲಿ ಹೋದರು ಎಂದು ಒಮ್ಮೆ ಸಿಟಿ ರವಿ ಅವರನ್ನು ವಿಚಾರಿಸಿ! ರಾಜ್ಯ ಬಿಜೆಪಿ ನಾಯಕರ ನಕಲಿತನ, ಸುಳ್ಳು, ಆತ್ಮವಂಚನೆ, ಡೋಂಗಿತನ ಎಲ್ಲವಕ್ಕೂ ಮೋದಿಯವರೇ ಪ್ರೇರಣೆಯೇ? ಎಂದು ಪ್ರಶ್ನಿಸಿದೆ.

ಮಂಡ್ಯದಲ್ಲಿ ಕಬ್ಬು ಬೆಳೆಗಾರರು ಹಲವು ದಿನಗಳಿಂದ ಪ್ರತಿಭಟಿಸುತ್ತಿದ್ದರೂ ಬಿಜೆಪಿ ಕ್ಯಾರೇ ಅನ್ನಲಿಲ್ಲ  ಈಗ ಅದೇ ಮಂಡ್ಯದಲ್ಲಿ ಮೋದಿ ಕರೆಸಿ ಬರಿಗೈ ಬೀಸಿದರೆ ಜನ ಕೇಳುವರೇ? ರಾಜ್ಯ ನಾಯಕರ ನಂತರ ಮೋದಿಗೂ ಖಾಲಿ ಕುರ್ಚಿಗಳ ದರ್ಶನವಾಗಿದೆ, ಹಣ ಕೊಟ್ಟರೂ ಬಾರದ ಜನ ಬಿಜೆಪಿ ಸೋಲಿಗೆ ಮುನ್ನುಡಿ ಬರೆದಿದ್ದಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ವ್ಯಂಗ್ಯವಾಡಿದೆ.

 

 

Leave a Reply

Your email address will not be published. Required fields are marked *