Breaking
Tue. Oct 8th, 2024

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಆರೋಪಿ ಹೊಟ್ಟೆಯಲ್ಲಿ 9 ಕೋಟಿ ಮೌಲ್ಯದ ಕೊಕೇನ್‌, 920 ಗ್ರಾಂ ಡ್ರಗ್ಸ್ ವಶ!

By Mooka Nayaka News Feb 17, 2024
Spread the love

ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಬೆಂಗಳೂರು ವಲಯದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವೆನಿಜುವೆಲಾ ಮೂಲದ ವ್ಯಕ್ತಿಯೋರ್ವನನ್ನು ವಶಕ್ಕೆ ಪಡೆದು 9 ಕೋಟಿ ಮೌಲ್ಯದ ಕೊಕೇನ್ ವಶಪಡಿಸಿಕೊಂಡಿದ್ದಾರೆ.

ಆರೋಪಿಯು ಫೆಬ್ರವರಿ 9ರಂದು ದುಬೈನಿಂದ ಎಮಿರೇಟ್ಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಿದ್ದಾಗ ಆತನನ್ನು ಡಿಆರ್‌ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಪ್ರವಾಸಿ ವೀಸಾದಲ್ಲಿ ಭಾರತಕ್ಕೆ ಬಂದಿದ್ದ 40 ವರ್ಷದ ಪ್ರಯಾಣಿಕನ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತನ ಹೊಟ್ಟೆಯಲ್ಲಿ ಕೊಕೇನ್ ಇರುವುದು ಪತ್ತೆಯಾಗಿದೆ.

ನಂತರ 920 ಗ್ರಾಂ ಕೊಕೇನ್ ನ 91 ಕ್ಯಾಪ್ಸುಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ. ಬಳಿಕ ಆರೋಪಿಯನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸಸ್ (ಎನ್‌ಡಿಪಿಎಸ್) ಕಾಯಿದೆ, 1985ರ ಅಡಿಯಲ್ಲಿ ಬಂಧಿಸಲಾಗಿದೆ.

ಕೊಕೇನ್ ಅನ್ನು ದೆಹಲಿಗೆ ತಲುಪಿಸಲು ತೆರಳುವಂತೆ ಆರೋಪಿಗೆ ಸೂಚಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. 2023ರ ಜನವರಿಯಿಂದ ಬೆಂಗಳೂರಿನ ಡಿಆರ್‌ಐಗೆ ಸಿಕ್ಕಿರುವ ಮೂರನೇ ಪ್ರಕರಣ ಇದಾಗಿದೆ. 2023ರ ಡಿಸೆಂಬರ್ 11ರಂದು, ಡಿಆರ್‌ಐ 2 ಕೆಜಿ ತೂಕದ 99 ಕೊಕೇನ್ ಕ್ಯಾಪ್ಸುಲ್‌ಗಳನ್ನು ನೈಜೀರಿಯನ್ ವ್ಯಕ್ತಿಯಿಂದ ವಶಪಡಿಸಿಕೊಂಡಿತ್ತು. ನಂತರ 2023ರ ಏಪ್ರಿಲ್ 28ರಂದು ಡಿಆರ್‌ಐ 40 ವರ್ಷದ ನೈಜೀರಿಯನ್ ಪ್ರಜೆಯನ್ನು KIA ನಲ್ಲಿ ಬಂಧಿಸಲಾಗಿತ್ತು. ಆತನ ಬಳಿಯಿಂದ ಕ್ಯಾಪ್ಸುಲ್ ರೂಪದಲ್ಲಿ ಸೇವಿಸಿದ್ದ 1 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಂಡಿತ್ತು.

Related Post