ಮುಂಬೈ: ಬಾಲಿವುಡ್ ಹಿಟ್ ಸಿನಿಮಾ ‘ಧೂಮ್’ ನಿರ್ದೇಶಕ ಸಂಜಯ್ ಗಧ್ವಿ(56) ಅವರು ಭಾನುವಾರ ಮುಂಬೈನ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ಅವರ ಹಿರಿಯ ಮಗಳು ಸಂಜಿನಾ ತಿಳಿಸಿದ್ದಾರೆ.
2000ರಲ್ಲಿ ತೆರೆಕಂಡ ‘ತೇರೆ ಲಿಯೆ’ ಚಿತ್ರದ ಮೂಲಕ ಬಾಲಿವುಡ್ ಪದಾರ್ಪಣೆ ಮಾಡಿದ್ದ ಗಧ್ವಿ ಅವರು, , 2002 ರಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣದ ಮೇರೆ ಯಾರ್ ಕಿ ಶಾದಿ ಹೈ ಮೂಲಕ ಅದ್ವುತ ಯಶಸ್ಸನ್ನು ಕಂಡರು. ಇದರ ನಂತರ, ಅವರು ಧೂಮ್ (2004) ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗುವುದರ ಜತೆಗೆ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಯಶಸ್ಸನ್ನು ಗಳಿಸಿತ್ತು.
ವರದಿಗಳ ಪ್ರಕಾರ, ಮುಂಬೈನ ಅಂಧೇರಿ ವೆಸ್ಟ್‌ನಲ್ಲಿರುವ ಲೋಖಂಡವಾಲಾ ಬ್ಯಾಕ್‌ರೋಡ್‌ನಲ್ಲಿ ಬೆಳಗಿನ ವಾಕ್ ಮಾಡುವಾಗ ಅವರಿಗೆ ಹಠಾತ್ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದ್ರೆ, ಚಿಕಿತ್ಸೆ ಕೊಡಲು ಮುಂದಾದ ವೈದ್ಯರು ಸಂಜಯ್ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
ಹಮ್ ತುಮ್ ಮತ್ತು ಫನಾ ಚಿತ್ರದ ನಿರ್ದೇಶಕ ಕುನಾಲ್ ಕೊಹ್ಲಿ ಸೇರಿದಂತೆ ಹಲವು ಬಾಲಿವುಡ್ ನಟ, ನಟಿಯರು ಸಾಮಾಜಿಕ ಮಾಧ್ಯಮದಲ್ಲಿ ಗಧ್ವಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.