Spread the love

ಶಿವಮೊಗ್ಗ: ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಸರ್ಕಾರ ರಚಿಸಬೇಕು ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಕುಪೇಂದ್ರ ಆಯನೂರು ಆಗ್ರಹಿಸಿದರು.

ಅವರು ಇಂದು ಮೀಡಿಯಾ ಹೌಸ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ವಿವಿಧ ಸಮಸ್ಯೆಗಳೊಂದಿಗ ಬದುಕು ಕಟ್ಟಿಕೊಂಡಿರುವ ಅಸಂಘಟಿತ ಕಾರ್ಮಿಕರ ಸಮೂಹ ತಮ್ಮ ಕಾಯಕವನ್ನು ಮಾಡುತ್ತಿವೆ. ಆದರೆ ರಾಜ್ಯ ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಮೂಲಭೂತ ಸೌಲಭ್ಯ ನೀಡುವಲ್ಲಿ ವಿಫಲವಾಗಿದೆ ಎಂದು ದೂರಿದರು.

ಚಾಲಕರು ಮತ್ತು ಇತರೆ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿಯನ್ನು ಅನುಷ್ಠಾನಗೊಳಿಸಿದರೆ ರಾಜ್ಯದ ೨೫ ಲಕ್ಷ ಕುಟುಂಬಗಳಿಗೆ ಮೂಲಭೂತ ಸೌಲಭ್ಯ ದೊರಕಲು ಸಾಧ್ಯವಾಗುತ್ತದೆ. ಆದರೆ ಇದನ್ನು ಸರ್ಕಾರ ಮಾಡದೆ ಹಿಂದೆ ಚಾಲಕ ಮತ್ತು ನಿರ್ವಾಹಕರಿಗೆ ಇದ್ದ ಅಪಘಾತ ವಿಮೆಯನ್ನು ಕ್ಲೀನರ್, ಟ್ಯಾಕ್ಸಿ ಹಾಗೂ ಆಟೋ ಚಾಲಕರಿಗೆ ವಿಸ್ತರಿಸಿದೆ. ಆದರೆ ಇದನ್ನೇ ಮಂಡಳಿಯನ್ನಾಗಿ ಮಾಡಿದ್ದರೆ ಇವರಿಗೆ ಇನ್ನೂ ಉತ್ತಮ ಸೌಲಭ್ಯ ಸಿಗುತ್ತಿತ್ತು. ಈಗಲಾದರೂ ಮಂಡಳಿ ರಚನೆ ಮಾಡುವಂತೆ ಮುಖ್ಯಮಂತ್ರಿಗಳಿಗೆ ಆಗ್ರಹಿಸಿದರು.

ರಾಜ್ಯದಲ್ಲಿ ಚಾಲಕರು, ಕ್ಲೀನರ್ ಮತ್ತು ನಿರ್ವಾಹಕರಿಗೆ ಕಾರ್ಮಿಕ ಇಲಾಖೆ ನೀಡುವ ೫ಲಕ್ಷ ರೂ. ಅಪಘಾತ ವಿಮೆ ವಿತರಣೆಗೆ ಅರ್ಜಿ ಸಲ್ಲಿಕೆ ಸಂಖ್ಯೆ ಕಡಿಮೆ ಇದೆ. ಇದಕ್ಕೆ ಕಾರಣ ಮಾಹಿತಿಯ ಕೊರತೆಯಿಂದಾಗಿ ಈ ಯೋಜನೆ ಕಾರ್ಮಿಕರಿಗೆ ಸರಿಯಾಗಿ ತಲುಪುತ್ತಿಲ್ಲ. ಆದ್ದರಿಂದ ಇವರಿಗೆ ಮಾಹಿತಿ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು ಎಂದರು.

ಕಮರ್ಷಿಯಲ್ ವಾಹನಗಳ ಚಾಲಕರ ಮಕ್ಕಳಿಗೆ ನೀಡಲಾಗುತ್ತಿರುವ ವಿದ್ಯಾನಿಧಿ ಯೋಜನೆಯು ಸರಿಯಾಗಿ ಕಾರ್ಯಗತವಾಗುತ್ತಿಲ್ಲ. ಈ ಬಗ್ಗೆ ಸರ್ಕಾರ ಗಮನಹರಿಸಿ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸಬೇಕೆಂದು ಆಗ್ರಹಿಸಿದರು. ಕಮರ್ಷಿಯಲ್ ಡ್ರೈವಿಂಗ್ ಬ್ಯಾಡ್ಜ್ ಇರುವ ಚಾಲಕರು, ನಿರ್ವಾಹಕರು, ಕ್ಲೀನರ್, ಮೆಕ್ಯಾನಿಕ್ ಹಾಗೂ ಇತರೆ ಕಾರ್ಮಿಕರು ಮಂಡಳಿ ಅನುಷ್ಠಾನಕ್ಕಾಗಿ ಜನವರಿಯಲ್ಲಿ ಮಖ್ಯಮಂತ್ರಿಗಳಿಗೆ ಹಾಗೂ ಕಾರ್ಮಿಕ ಸಚಿವರಿಗೆ ಪತ್ರ ಬರೆಯುವ ಮೂಲಕ ಒತ್ತಾಯಿಸಬೇಕು ಎಂದ ಅವರು, ಅನುಷ್ಠಾನಗೊಳ್ಳದಿದ್ದಲ್ಲಿ ಸರ್ಕಾರದ ವಿರುದ್ಧ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಡಿ.೨ರಂದು ಶಿವಮೊಗ್ಗದ ಶಂಕರಮಠ ರಸ್ತೆಯಲ್ಲಿರುವ ಬಜಾಜ್ ಶೋರೂಂ ಆವರಣದಲ್ಲಿ ಅಸಂಘಟಿತ ಕಾರ್ಮಿಕರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಸಂಘ ಹಮ್ಮಿಕೊಂಡಿದ್ದು ಇದರ ಪ್ರಯೋಜನವನ್ನು ಕಾರ್ಮಿಕರು ಪಡೆದುಕೊಳ್ಳುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಪ್ರದೀಪ್ ಹೊನ್ನಪ್ಪ, ರತ್ನಮಾಲಾ ಸುರೇಶ್, ಮಹೇಶ್ ಪೇಟ್ಕರ್, ಚೇತನ್ ಲಕ್ಕಪ್ಪ, ಸುರೇಖಾ ಪಾಲಾಕ್ಷಪ್ಪ, ವೈ. ಚಂದ್ರಶೇಖರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *