‘ಕಚ್ಚಾ ಬಾದಮ್’ ಹಾಡನ್ನು ಹಾಡುವ ಮೂಲಕ ಪಶ್ಚಿಮ ಬಂಗಾಳದ ಭುಬನ್ ಬಡ್ಯಾಕರ್ ಅವರು ರಾತ್ರೋರಾತ್ರಿ ಸ್ಟಾರ್ ಆಗಿದ್ದರು. ಎಲ್ಲೆಲ್ಲೂ ಅವರದ್ದೇ ಸುದ್ದಿ ಆಗಿತ್ತು. ಇನ್ಸ್ಟಾಗ್ರಾಮ್ ರೀಲ್ಸ್ನಲ್ಲಿ ಈ ಸಾಂಗ್ ಹೆಚ್ಚು ಪ್ರಚಲಿತದಲ್ಲಿತ್ತು. ಈ ಸಂಭ್ರಮ ಕೆಲವೇ ಕೆಲವು ತಿಂಗಳು ಮಾತ್ರ ಇತ್ತು. ಈಗ ‘ಕಚ್ಚಾ ಬಾದಾಮ್’ ಗಾಯಕನ ಪರಿಸ್ಥಿತಿ ಭೀಕರ ಆಗಿದೆ. ಮನೆ ಬಾಡಿಗೆ ಕಟ್ಟಲೂ ಹಣ ಇಲ್ಲದಂತಾಗಿದೆ.
ಪಶ್ಚಿಮ ಬಂಗಾಳದ ಹಳ್ಳಿಗಳಲ್ಲಿ ಹಾಡು ಹೇಳುತ್ತ ಕಡಲೆಕಾಯಿ (ಶೇಂಗಾ) ಮಾರುತ್ತಾ ಭುಬನ್ ಜೀವನ ಸಾಗಿಸುತ್ತಿದ್ದವರು. ಈ ಹಾಡನ್ನು ಊರಿನವರೇ ಕೆಲವರು ರೆಕಾರ್ಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದರು. ಈ ವಿಡಿಯೋ ಸಖತ್ ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಹಾಡಿನ ಸಾಹಿತ್ಯ ಅರ್ಥವಾಗದಿದ್ದರೂ, ಭುಬನ್ ಹಾಡಿದ ರೀತಿ ಎಲ್ಲರಿಗೂ ಇಷ್ಟವಾಗಿತ್ತು. ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಸಖತ್ ಸೌಂಡ್ ಮಾಡಿತ್ತು. ಭುಬನ್ ಅವರನ್ನು ಇಟ್ಟುಕೊಂಡು ‘ಕಚ್ಚಾ ಬಾದಾಮ್..’ ವಿಡಿಯೋ ಸಾಂಗ್ ಮಾಡಲಾಗಿದೆ. ಈಗ ಜನಪ್ರಿಯತೆ ಅವರಿಗೆ ಮುಳುವಾಗಿದೆ.
‘ದುಬರಾಜಪುರದಲ್ಲಿ ನಾನು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇನೆ. ಬಾಡಿಗೆಗೆ ಸಾಕಷ್ಟು ಹಣ ಖರ್ಚು ಮಾಡುತ್ತಿದ್ದೇನೆ. ನನಗೆ ಆದಾಯವೇ ಇಲ್ಲದಂತಾಗಿದೆ. ಇನ್ನು ಎಷ್ಟು ದಿನ ಈ ರೀತಿ ನಡೆಯುತ್ತದೆ ಎಂಬುದು ನನಗೆ ತಿಳಿದಿಲ್ಲ. ‘ಕಚ್ಚಾ ಬಾದಾಮ್..’ ಹಾಡು ನನಗೆ ಜನಪ್ರಿಯತೆ ನೀಡಿದೆ. ಆದರೆ ಈಗ ಆ ಕಾರಣದಿಂದ ನನ್ನ ಮನೆಯಲ್ಲಿ ಇರಲು ನನಗೆ ಸಾಧ್ಯವಾಗುತ್ತಿಲ್ಲ’ ಎಂದು ದುಃಖ ತೋಡಿಕೊಂಡಿದ್ದಾರೆ ಭುಬನ್.
ಪಶ್ಚಿಮ ಬಂಗಾಳದ ಕಂಪನಿಯೊಂದು ‘ಕಚ್ಚಾ ಬಾದಾಮ್..’ ಹಾಡಿನ ಹಕ್ಕನ್ನು ಪಡೆದಿದೆಯಂತೆ. ಇದರ ಪ್ರಕಾರ ಭುಬನ್ ಈ ಹಾಡನ್ನು ಹಾಡುವಂತಿಲ್ಲ. ನನ್ನ ಒಪ್ಪಿಗೆ ಇಲ್ಲದೆ ಈ ಹಾಡಿನ ಹಕ್ಕನ್ನು ಯಾರು ಕೊಂಡುಕೊಳ್ಳುತ್ತಾರೆ ಅನ್ನೋದು ಅವರ ಪ್ರಶ್ನೆ. ‘ನಾನು ವಿದ್ಯಾವಂತನಲ್ಲ. ನನಗೆ ಇಂಗ್ಲಿಷ್ ಓದಲೂ ಬರುವುದಿಲ್ಲ. ನನ್ನ ಹಾಡನ್ನು ಖರೀದಿಸಿರುವುದಾಗಿ ಅವರು ಹೇಳುತ್ತಿದ್ದಾರೆ. ನಾನು ಅವರನ್ನು ಫೋನ್ ಮೂಲಕ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ’ ಎಂದು ಬೇಸರತೋಡಿಕೊಂಡಿದ್ದಾರೆ ಅವರು.