ಚಿತ್ರದುರ್ಗ: ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಎಚ್ ಕಾಂತರಾಜ್ ನೇತೃತ್ವದ ಕಾಂತರಾಜ್ ಆಯೋಗದ ಜಾತಿ ಆಧಾರಿತ ಸಾಮಾಜಿಕ-ಆರ್ಥಿಕ ಗಣತಿ ಮತ್ತು ಶಿಫಾರಸುಗಳನ್ನು ಅವೈಜ್ಞಾನಿಕ ಎಂದು ಬಣ್ಣಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಅವರು ತಮ್ಮ ಹಿಂದಿನ ಅಧಿಕಾರಾವಧಿಯಲ್ಲಿ ಬಂದ ವರದಿಯನ್ನು ಏಕೆ ಅನುಷ್ಠಾನಗೊಳಿಸಲಿಲ್ಲ ಎಂದು ಗುರುವಾರ ಪ್ರಶ್ನಿಸಿದರು.
ಜಿಲ್ಲೆಯ ವಿವಿಧ ಮಠಗಳಿಗೆ ಭೇಟಿ ನೀಡಿದ ಅವರು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದು, ವರದಿ ಅರೆಬೆಂದಿದ್ದು, ಹಲವು ನ್ಯೂನತೆಗಳಿವೆ. ಸಿಎಂ ನಿರ್ದೇಶನದಂತೆ ವರದಿಯನ್ನು ಸ್ಕ್ರಿಪ್ಟ್ ಮಾಡಲಾಗಿದೆ. ಕಾಂತರಾಜ್ ವರದಿಗೆ ಅಂದಿನ ಕಾಂಗ್ರೆಸ್ ಸರ್ಕಾರ 150 ಕೋಟಿ ರೂ. ವ್ಯಯಿಸಿದೆ ಎಂದರು.
‘ಅಧಿಕಾರಿಗಳು ಜನರ ಮನೆ ಬಾಗಿಲಿಗೆ ಭೇಟಿ ನೀಡದೆ ತಮ್ಮ ಎಸಿ ಚೇಂಬರ್‌ನಲ್ಲಿ ಕುಳಿತು ವರದಿ ಸಿದ್ಧಪಡಿಸಿದ್ದಾರೆ ಎಂದು ಆರೋಪಿಸಿದ ಅವರು, ಅದಕ್ಕಿಂತ ಮುಖ್ಯವಾಗಿ ತಮ್ಮ ಅಧಿಕಾರವಧಿಯಲ್ಲೇ ವರದಿ ಬಂದಿದ್ದರೂ, ಸಿದ್ದರಾಮಯ್ಯನವರು ಅನುಷ್ಠಾನ ಮಾಡಿಲ್ಲ ಎಂದು ದೂರಿದರು.
2018ರ ವೀರಶೈವ-ಲಿಂಗಾಯತ ಜಗಳದಲ್ಲಿ ಸಿದ್ದರಾಮಯ್ಯ ಸಮುದಾಯದಲ್ಲಿ ಒಡಕು ಮೂಡಿಸಲು ಯತ್ನಿಸಿ ವಿಫಲರಾಗಿದ್ದರು. ಈಗ ಕಾಂಗ್ರೆಸ್ ಕಾಂತರಾಜ್ ವರದಿ ಮೂಲಕ ಸಮುದಾಯವನ್ನು ಒಡೆಯಲು ಯತ್ನಿಸುತ್ತಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.