ಬೆಂಗಳೂರು : ಹಳ್ಳಿ ಭಾಗದಿಂದ ಕೆಲಸ ಬಯಸಿ ಬೆಂಗಳೂರಿಗೆ ಬರುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಉದ್ಯೋಗ ಕೊಡಿಸುವ ಭವರಸೆ ನೀಡಿ ಲಕ್ಷಾಂತರ ರೂಪಾಯಿ ಪಡೆದ ಬ್ಯಾಂಕಾಕ್ನಲ್ಲಿ ಮೋಜುಮಸ್ತಿ ಮಾಡುತ್ತಿದ್ದ ಆರೋಪಿಯನ್ನು ನಗರದ ವಿಧಾನಸೌಧ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಹನ್ ಕುಮಾರ್ (53) ಬಂಧಿತ ಆರೋಪಿ.
ಇನ್ನೇನು ಓದು ಮುಗಿತು, ಸರ್ಕಾರಿ ಉದ್ಯೋಗಕ್ಕೆ ಯತ್ನಿಸಬೇಕು, ಅಲ್ಲಿವೆರೆಗೆ ಏನಾದರೂ ಉದ್ಯೋಗ ಮಾಡಬೇಕು ಎಂದು ಯೋಚಿಸಿ ಬೆಂಗಳೂರಿಗೆ ಬರುವ ಹಳ್ಳಿ ಭಾಗದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಮೋಹನ್ ಕುಮಾರ್, ಬಣ್ಣ ಬಣ್ಣದ ಮಾತುಗಳನ್ನಾಡಿ ಬಳಿಕ ಎಫ್ಡಿಎ, ಎಸ್ಡಿಎನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಾನೆ.
ಮೋಹನ್ನ ಬಣ್ಣ ಬಣ್ಣದ ಮಾತುಗಳಿಂದ ಬಲೆಗೆ ಬಿದ್ದ ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಾನೆ. ಇದೇ ದುಡ್ಡಲ್ಲಿ ಬ್ಯಾಂಕಾಕ್ಗೆ ಹೋಗಿ ಮೋಜುಮಸ್ತಿ ಮಾಡುತ್ತಿದ್ದನು. ಹೀಗೆ ಬ್ಯಾಂಕಾಕ್ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋಹನ್ ಕೈಗಳಿಗೆ ವಿಧಾನಸೌಧ ಪೊಲೀಸರು ಕೋಳ ಹಾಕಿದ್ದಾರೆ.
ಎಸ್ಡಿಎ ಕೆಲಸ ಕೊಡಿಸುವುದಾಗಿ ಗಿರಿಜಾ ಎಂಬ ಯುವತಿಯಿಂದ ಏಳು ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದ. ವಿಧಾನಸೌಧದಲ್ಲಿ ಅಧಿಕಾರಿಗಳ ಪರಿಚಯವಿದ್ದು, ನೇರ ನೇಮಕಾತಿ ಮಾಡಿಸುವುದಾಗಿ ಹೇಳಿ ಹಣ ಪಡೆದು ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಯುವತಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.