Spread the love

ಶಿವಮೊಗ್ಗ: ಮುಖ್ಯಮಂತ್ರಿ ಕುರ್ಚಿಗಾಗಿ ಕಾಂಗ್ರೆಸ್ ನಾಯಕರ ನಡುವಿನ ಶೀತಲ ಸಮರ ಮುಂದಿನ ದಿನಗಳಲ್ಲಿ ಉತ್ತುಂಗಕ್ಕೇರಲಿದೆ ಎಂದು ಶಿಕಾರಿಪುರ ಶಾಸಕ ಬಿ.ವೈ.ವಿಜಯೇಂದ್ರ ಅವರು  ಭವಿಷ್ಯ ನುಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ಪಾಂಡವರು–ಕೌರವರ ನಡುವೆ ಗದಾಯುದ್ಧ ನಡೆದಿದ್ದರ ಬಗ್ಗೆ ಈ ಹಿಂದೆ ಕೇಳಿದ್ದೆವು. ಈಗ ಕಾಂಗ್ರೆಸ್ ಪಕ್ಷದ ಒಳಗಡೆಯೇ ಮಹಾಯುದ್ಧವಾಗಲಿದೆ. ರಾಜ್ಯದ ಜನರು ಶೀಘ್ರ ಸರ್ಕಾರದ ವಿರುದ್ಧ ತಿರುಗಿ ಬೀಳಲಿದ್ದಾರೆ‘ ಎಂದು ಹೇಳಿದರು.

ಕಾಂಗ್ರೆಸ್ ನಾಯಕರ ನಡುವಿನ ಈ ಆಂತರಿಕ ಕಿತ್ತಾಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಮೋದಿ ಮತ್ತೊಮ್ಮೆ ಪ್ರಧಾನಿ ಹುದ್ದೆಗೆ ಏರಲಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರಬಹುದು. ಆದರೆ ಬಿಜೆಪಿ ಮತ್ತೆ ಗೆದ್ದು ಬರಲಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಬರಗಾಲ ಇದ್ದರೂ ಪರಿಹಾರ ಕಾರ್ಯಗಳತ್ತ ಗಮನ ನೀಡದೇ ಆಂತರಿಕ ಕಿತ್ತಾಟದಲ್ಲಿ ತೊಡಗಿರುವ ಕಾಂಗ್ರೆಸ್‌ನವರಿಗೆ ಜನ ಶಾಪ ಹಾಕುತ್ತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ದಿನಾ ಬೈಯುತ್ತಿದ್ದರೆ ಕೇಂದ್ರದಿಂದ ಅನುದಾನ ಸಿಗುತ್ತಾ ಎಂದು ಯಡಿಯೂರಪ್ಪ ಅವರು ಹೇಳಿರುವುದು ಸರಿಯಾಗಿದೆ. ಪ್ರಧಾನಿ ಟೀಕೆಯಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗೊಲ್ಲ. ಬದಲಿಗೆ ರೈತಾಪಿ ವರ್ಗಕ್ಕೆ, ಜನಸಾಮಾನ್ಯರಿಗೆ ಅನಾನುಕೂಲವಾಗಲಿದೆ ಎಂದರು.

ಈ ಹಿಂದೆ ಬಿಜೆಪಿ ಸರ್ಕಾರ ರಚನೆ ಸಮಯದಲ್ಲಿ ಕಾಂಗ್ರೆಸ್‌ನಿಂದ ಹೋಗಿದ್ದ ಶಾಸಕರಿಗೆ ತಲಾ ರೂ.50 ಕೋಟಿ ಕೊಡಲಾಗಿತ್ತು ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರ ಹೇಳಿಕೆಯೇ ಹಾಸ್ಯಾಸ್ಪದ ಎಂದು ಪ್ರಶ್ನೆಯೊಂದಕ್ಕೆ ಇದೇ ವೇಳೆ ಪ್ರತಿಕ್ರಿಯಿಸಿದರು.

Leave a Reply

Your email address will not be published. Required fields are marked *