ಬೆಂಗಳೂರು: ಸದ್ಯವೇ ಲೋಕಸಭಾ ಚುನಾವಣೆ ಇರುವ ಕಾರಣ ನಾವು ಭಿನ್ನಮತ ಪ್ರದರ್ಶಿಸುವುದು ಸರಿಯಲ್ಲ. ಹೀಗಾಗಿ ಎಲ್ಲ ಮುನಿಸುಗಳನ್ನು ಬದಿಗಿಟ್ಟು, ಸುಭದ್ರ ಸರಕಾರ ನೀಡೋಣ ಹಾಗೂ ಲೋಕಸಭಾ ಚುನಾವಣೆಯತ್ತ ದೃಷ್ಟಿ ಹರಿಸೋಣ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಸಂಪುಟದ ಸಚಿವರಿಗೆ ಮನವಿ ಮಾಡಿದ್ದಾರೆ.
ಶನಿವಾರ ಸಂಪುಟದ ಅರ್ಧದಷ್ಟು ಸಚಿವರ ಜತೆಗೆ “ಬ್ರೇಕ್‌ಫಾಸ್ಟ್ ಮೀಟಿಂಗ್’ ನಡೆಸಿರುವ ಸಿಎಂ, ಅನಗತ್ಯ ಹೇಳಿಕೆ ನೀಡಿ ವಿವಾದ ಸೃಷ್ಟಿಸದಂತೆ ಎಲ್ಲರನ್ನೂ ಕೋರಿಕೊಂಡಿದ್ದಾರೆ.
ಉಪಾಹಾರ ಕೂಟದಲ್ಲಿ ಡಿಸಿಎಂ ಶಿವಕುಮಾರ್, ಡಾ| ಜಿ. ಪರಮೇಶ್ವರ, ಎಂ.ಬಿ. ಪಾಟೀಲ್, ರಾಮಲಿಂಗಾ ರೆಡ್ಡಿ, ಈಶ್ವರ ಖಂಡ್ರೆ, ಕೆ.ಎನ್. ರಾಜಣ್ಣ ಸೇರಿ 15 ಸಚಿವರು ಭಾಗವಹಿಸಿದ್ದರು. ಉಳಿದ ಸಚಿವರಿಗೆ ಮುಂದಿನ ದಿನಗಳಲ್ಲಿ ಉಪಾಹಾರ ಕೂಟ ಏರ್ಪಡಿಸಲು ಸಿಎಂ ನಿರ್ಧರಿಸಿದ್ದಾರೆ.
ಸಭೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಪಕ್ಷ ಹಾಗೂ ಸರಕಾರದ ಆಂತರಿಕ ವಿಚಾರವಾಗಿ ಅನಗತ್ಯ ಹೇಳಿಕೆ ನೀಡದಂತೆ ಸಿಎಂ ತಿಳಿಸಿದ್ದಾರೆ. ನಾನು ಸಹಿತ ಯಾರೊಬ್ಬರೂ ಈ ವಿಷಯದಲ್ಲಿ ಮಾತನಾಡುವುದು ಬೇಡ ಎಂದರು.
ಮಾಧ್ಯಮದವರು ಪ್ರಶ್ನೆ ಕೇಳಿದರೂ ಏನೂ ಪ್ರತಿಕ್ರಿಯೆ ನೀಡಬೇಡಿ. ಮಾಧ್ಯಮಗಳ ರಾಜಕೀಯ ಬಲೆಗೆ ಬೀಳಬೇಡಿ ಎಂದು ಸೂಚಿಸಿದ್ದೇವೆ. ರಾಜ್ಯದ ಜನ ಐದು ವರ್ಷ ಅಧಿಕಾರ ಮಾಡಲು ಆಶೀರ್ವಾದ ಮಾಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಚರ್ಚೆ ಅನಗತ್ಯ. ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಮತದಾರರ ಅಭಿಪ್ರಾಯ ಪಡೆಯಲಾಗುವುದು. ಹೀಗಾಗಿ ಸಚಿವರಿಗೆ ತಮ್ಮ ಜಿಲ್ಲಾ ಪ್ರವಾಸ ಮಾಡಲು ಸೂಚನೆ ನೀಡಿದ್ದೆವು. ಕೆಲವು ಸಚಿವರ ಪ್ರವಾಸಕ್ಕೆ ಸಮಿತಿ ಜೋಡಿಸಿರಲಿಲ್ಲ. ಈಗ ಸಮಿತಿಯಲ್ಲಿ ಸೇರಿಸುವ ಬಗ್ಗೆ ಚರ್ಚಿಸಲಾಯಿತು ಎಂದು ಹೇಳಿದರು.