Spread the love

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಸಾಧು ಸಂತರ ಶಾಪ ತಟ್ಟಲಿದೆ ಎಂದಿರುವ ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ, ಇನ್ನು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ಸುಳ್ಳು ಹೇಳುವುದರಲ್ಲಿ ನೊಬೆಲ್ ಪ್ರಶಸ್ತಿ ನೀಡಬೇಕು. ನಾನೆ ಐದು ವರ್ಷ ಸಿಎಂ ಅಂದರು. ವಿರೋಧ ವ್ಯಕ್ತವಾದಾಗ ಉಲ್ಟಾ ಹೊಡೆದರು. ಅವರು ಸಿದ್ದರಾಮಯ್ಯ ಅಲ್ಲ ಸುಳ್ಳುರಾಮಯ್ಯ. ಜಾತಿಗಣತಿ ವಿಚಾರದಲ್ಲೂ ಸುಳ್ಳು ಹೇಳಿದ್ದಾರೆ. ಹಿಂದೆ ವರದಿ ನೀಡಿದ್ದಾಗ ಸಿಎಂ ಆಗಿದ್ದಾಗಲೇ ಜಾರಿಗೆ ತರುವುದಾಗಿ ಹೇಳಿದ್ದರು. ಸ್ವಲ್ಪ ದಿನಗಳ ಹಿಂದೆ ಸಾಧು ಸಂತರು ಭೇಟಿಯಾದಾಗ ನವೆಂಬರ್ ನಲ್ಲಿ ಜಾರಿಗೆ ತರುವುದಾಗಿ ಹೇಳಿದ್ದರು. ಈಗ ಅದನ್ನು ಜಾರಿಗೆ ತರಲು ಹಿಂದೇಟು ಹಾಕುತ್ತಿದ್ದಾರೆ. ಆದ್ದರಿಂದ ಸಾಧು ಸಂತರ ಶಾಪ ಸಿದ್ದರಾಮಯ್ಯಗೆ ತಟ್ಟುತ್ತದೆ. ದಲಿತರು ಹಿಂದುಳಿದ ವರ್ಗದವರ ಶಾಪವು ತಟ್ಟುತ್ತದೆ. ಸದ್ಯದಲ್ಲೇ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. ತಿಂಗಳು – ವರ್ಷ ಅಲ್ಲ, ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ ಎಂದು ಹೇಳಿದ್ದಾರೆ.

ಯಾವತ್ತು ಸಿದ್ದರಾಮಯ್ಯ ಯಾವ ಪಕ್ಷ ಕಟ್ಟುವುದಿಲ್ಲ. ಯಾರೋ ಕಟ್ಟಿದ ಪಕ್ಷಕ್ಕೆ ಬಂದು ಅಧಿಕಾರ ಮಾಡುವುದು ಸಿದ್ದರಾಮಯ್ಯನವರ ಚಾಳಿ. ಜೆಡಿಎಸ್ ನಿಂದ ಅವತ್ತು ಹೊರಗಡೆ ಬಂದಾಗ ನಾಯಿ ಹಸದಿತ್ತು, ಅನ್ನ ಹಳಸಿತ್ತು ಎಂಬ ರೀತಿ ಕಾಂಗ್ರೆಸ್ ಸೇರಿದರು. ಈಗಲೂ ಸಿಎಂ ಸ್ಥಾನದಿಂದ ಅವರನ್ನು ಇಳಿಸಿದರೆ ಅಪ್ಪಿತಪ್ಪಿಯೂ ಪಕ್ಷ ಕಟ್ಟುತ್ತೇನೆ ಎಂದು ಹೇಳುವುದಿಲ್ಲ. ಅದು ಸಿದ್ದರಾಮಯ್ಯ ಚಾಳಿ ಎಂದು ಟೀಕಿಸಿದರು.

ಸಿದ್ದರಾಮಯ್ಯ ಪೂರ್ವವಾದರೆ, ಡಿಕೆ ಶಿವಕುಮಾರ್ ಪಶ್ಚಿಮ. ಇವರಿಬ್ಬರ ಕಥೆಯೇ ಹೀಗಾದರೆ ಉಳಿದ ಸಚಿವರುಗಳ ಕಥೆ ಏನಾಗಿರಬೇಡ? ಕಾಂತರಾಜ್ ಆಯೋಗದ ವರದಿಯನ್ನ ಒಪ್ಪಿಕೊಳ್ಳುತ್ತೇವೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ವರದಿ ಒಪ್ಪಿಕೊಳ್ಳುವುದಿಲ್ಲ ಎಂದು ಡಿ.ಕೆ. ಹೇಳುತ್ತಾರೆ. ಸರ್ಕಾರ ನಂಬರ್ ಒನ್ ನಂಬರ್ ಟು ನಡುವೆಯೇ ಸಮನ್ವಯತೇ ಇಲ್ಲ ಎಂದು ಕಿಡಿಕಾರಿದರು.

 

Leave a Reply

Your email address will not be published. Required fields are marked *