ಕೊಪ್ಪಳ: ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತಾಳುತ್ತಿದೆ. ರಾಜ್ಯ ಬಿಜೆಪಿಯವರು ಮೊದಲು ಕೇಂದ್ರ ಸರ್ಕಾರದ ದಿಂದ ಹಣ ಬಿಡುಗಡೆ ಮಾಡಿಸಲಿ. ನಮ್ಮ ಸಚಿವರು ಕೇಂದ್ರದ ಸಚಿವರನ್ನು ಭೇಟಿ ಮಾಡಲು ಹೋದರೂ ಅವರ ಭೇಟಿಗೆ ಅವಕಾಶ ಕೊಡುತ್ತಿಲ್ಲ. ನಮಗೆ ಕೇಂದ್ರದಿಂದ 600 ಕೋಟಿ ನರೇಗಾ ಯೋಜನೆ ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಬಗ್ಗೆ ಕೇಂದ್ರ ಮಲತಾಯಿ ಧೋರಣೆ ತಾಳುತ್ತಿದೆ. ಒಂದು ತಿಂಗಳ ಹಿಂದೆಯೇ ನಾವು ಕೇಂದ್ರಕ್ಕೆ ಹಣ ಕೇಳಿದ್ದೇವೆ. ಇನ್ನೂ ಹಣ ಬಿಡುಗಡೆ ಮಾಡಿಲ್ಲ ಎಂದರು.
ಸುರ್ಜೆವಾಲ ಹಾಗೂ ವೇಣುಗೋಪಾಲ ಲೋಕಸಭಾ ಚುನಾವಣೆಯ ಚರ್ಚೆ ಹಾಗೂ ಮುಂಬರುವ ದಿನಗಳಲ್ಲಿ ಶಾಸಕರುಗಳನ್ನು ನಿಗಮ ಮಂಡಳಿಗೆ ನೇಮಕ ಮಾಡಲು ಚರ್ಚೆಗೆ ಬಂದಿದ್ದರು. ಜಿಲ್ಲೆಯ ಬರ ನಿರ್ವಹಣೆಯಲ್ಲಿ ಉಸ್ತುವಾರಿ ಸಚಿವರು ತಮ್ಮ ತಮ್ಮ ಜಿಲ್ಲೆಯಲ್ಲಿ ಪ್ರವಾಸ ಮಾಡುತ್ತಿದ್ದಾರೆ ಎಂದರು.
ಪ್ರಧಾನಿಗಳು ಬರ ಕುರಿತು ಚರ್ಚೆಗೆ ಅವಕಾಶವನ್ನೇ ಕೊಡುತ್ತಿಲ್ಲ. ರಾಜ್ಯದ ಬಿಜೆಪಿಯ ಸಂಸದರು ಏನು ಮಾಡುತ್ತಿದ್ದಾರೆ. ಬಿಜೆಪಿ ಈಗ ಬರ ಅಧ್ಯಯನ ಮಾಡಲು ಹೊರಟಿದೆ. ಮೊದಲು ಕೇಂದ್ರ ಬಳಿ ಹೋಗಿ ಅನುದಾನ ಕೊಡಲು ಹೇಳಲಿ. ಮೋದಿ ಅವರು ತಮ್ಮ ಶಾಸಕ, ಸಚಿವರನ್ನೇ ಭೇಟಿಯಾಗಲ್ಲ. ಇನ್ನು ನಮ್ಮನ್ನು ಏನು ಭೇಟಿಗೆ ಅವಕಾಶ ಕೊಡುತ್ತಾರೆಯೇ ಎಂದು ಪ್ರಶ್ನಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಮಧ್ಯೆ ರಾಜ್ಯದ ಭ್ರಷ್ಟಾಚಾರ ಅನಾವರಣ ಎಂಬ ಬಿಎಸ್ವೈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಇದೆಲ್ಲ ಶುದ್ದ ಸುಳ್ಳು. ಬಿಜೆಪಿಯವರು ಯಡಿಯೂರಪ್ಪ ಅವರನ್ನು ಕಣ್ಣೀರು ಹಾಕಿಸಿ ಮನೆಗೆ ಕಳಿಸಿದರು. ಈಗ ಅವರು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆ ಎಂದರು.